ನವದೆಹಲಿ : ಬಾಲಿವುಡ್ ಮತ್ತು ಟಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ ನೇಹಾ ಶರ್ಮ (Neha Sharma) ಇದೀಗ ರಾಜಕೀಯದಲ್ಲಿ ಒಂದು ಕೈ ನೋಡಲು ಮುಂದಾಗಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ರಾಮ್ ಚರಣ್ ತೇಜ ಅವರ ಅಭಿನಯದ ಮೊದಲ ಸಿನಿಮಾ ಚಿರುತಾ ಮೂಲಕ ಸಿನಿಮಾ ರಂಗಕ್ಕೆ ಅಡಿ ಇಟ್ಟ ನೇಹಾ ಶರ್ಮ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
2020ರಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ ನಟಿ ಕ್ರೂಕ್ಸ್ ಸಿನಿಮಾದಲ್ಲಿ ಗಮನಸೆಳೆಯುವ ನಟನೆ ಮೂಲಕ ಅಭಿಮಾನಿಗಳ ಪಡೆಯನ್ನು ಸೃಷ್ಟಿಸಿಕೊಂಡರು ಆ ನಂತರ ಬಂದ ಯಶಸ್ವಿ ಚಿತ್ರ ತಾನಾಜಿಯಲ್ಲಿನ ಅಮೋಘ ಅಭಿನಯದ ಮೂಲಕ ಸಿನಿ ರಸಿಕರ ಗಮನ ಸೆಳೆದರು.
ಸಿನಿಮಾ ರಂಗದಲ್ಲಿ ಸಾಕಷ್ಟು ಬೇಡಿಕೆ ಹೊಂದಿರುವ ಈ ನಟಿ ಇದೀಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯದಲ್ಲೂ ಒಂದು ಕೈ ನೋಡಲು ಮುಂದಾಗಿದ್ದಾರೆ.
ಅಂದಹಾಗೆ ನೇಹಾ ಶರ್ಮಾರದ್ದು ರಾಜಕೀಯ ಹಿನ್ನೆಲೆಯ ಕುಟುಂಬ. ಈಕೆಯ ತಂದೆ ಅಜಿತ್ ಶರ್ಮಾ ಕಾಂಗ್ರೆಸ್ ನಾಯಕ. ಬಿಹಾರದ ಭಗಲ್ಪುರ ಕ್ಷೇತ್ರದಿಂದ ಈಗ ತಮ್ಮ ಪುತ್ರಿ ನೇಹಾ ಶರ್ಮಾಗೆ ಟಿಕೆಟ್ ಕೊಡಿಸಲು ಅಜಿತ್ ಶರ್ಮಾ ಪ್ರಯತ್ನ ಮಾಡ್ತಿದ್ದಾರೆ. ಈ ವಿಚಾರವನ್ನು ಅಜಿತ್ ಶರ್ಮಾ ಬಹಿರಂಗವಾಗಿಯೂ ಕೂಡ ಹೇಳಿದ್ದಾರೆ.
ಭಗಲ್ಪುರ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಈ ಕ್ಷೇತ್ರದ ಮೇಲೆ ಅಜಿತ್ ಶರ್ಮಾಗೂ ಒಳ್ಳೆಯ ಹಿಡಿತ ಇದೆ. ಪಕ್ಷ ಬಯಸಿದ್ರೆ ನಾನು ಸ್ಪರ್ಧೆ ಮಾಡ್ತೇನೆ.. ಇಲ್ಲ ಅಂದ್ರೆ ನನ್ನ ಮಗಳನ್ನು ನಿಲ್ಲಿಸ್ತೇನೆ.. ಈ ಬಗ್ಗೆ ಸದ್ಯದಲ್ಲಿಯೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಅಜಿತ್ ಶರ್ಮಾ ತಿಳಿಸಿದ್ದಾರೆ.

