ನ್ಯೂಯಾರ್ಕ್: ಅತಿ ಸಣ್ಣ ಕ್ಲಿನಿಕಲ್ ಟ್ರಯಲ್ ಒಂದರಲ್ಲಿ ಭಾಗವಹಿಸಿದ್ದ ಗುದನಾಳದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 18 ರೋಗಿಗಳು ಕ್ಯಾನ್ಸರ್ ಮುಕ್ತರಾಗಿದ್ದಾರೆ. ಪ್ರಾಯೋಗಿಕ ಔಷಧದಿಂದಲೇ ಕ್ಯಾನ್ಸರ್ ರೋಗಿಗಳು ಪೂರ್ಣ ಗುಣಮುಖರಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಈ ರೋಗಿಗಳು ಸುಮಾರು ಆರು ತಿಂಗಳು ಕಾಲ ಡೋಸ್ಟರ್‍ಲಿಮಾಬ್ ಎಂಬ ಔಷಧವನ್ನು ಸೇವಿಸಿದ್ದು ಅಂತ್ಯದಲ್ಲಿ ಅವರ ದೇಹದಲ್ಲಿದ್ದ ಕ್ಯಾನ್ಸರ್ ಗೆಡ್ಡೆ ಮಾಯವಾಗಿದೆ.
ಮಾನವ ದೇಹದಲ್ಲಿರುವ ರೋಗ ಪ್ರತಿಕಾಯಗಳಿಗೆ ಪರ್ಯಾಯವಾಗಿರುವ ಲ್ಯಾಬ್ ಉತ್ಪಾದಿತ ಮಾಲಿಕ್ಯೂಲ್‍ಗಳನ್ನು ಈ ಔಷಧ ಹೊಂದಿದೆ. ಎಲ್ಲಾ ರೋಗಿಗಳಿಗೂ ಅದೇ ಔಷಧ ನೀಡಲಾಗಿದ್ದು ಅಂತಿಮವಾಗಿ ಅವರ ತಪಾಸಣೆ ನಡೆಸಿದಾಗ ಎಂಡೋಸ್ಕೋಪಿ, ಪೊಸಿಟ್ರಾನ್ ಎಮಿಶನ್ ಟೊಮೋಗ್ರಾಫಿ ಅಥವಾ ಪೆಟ್ ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್ ಮಾಡಿದಾಗಲೂ ಕ್ಯಾನ್ಸರ್ ಲಕ್ಷಣಗಳು ಗೋಚರಿಸಿಲ್ಲ.
ಕ್ಯಾನ್ಸರ್ ಇತಿಹಾಸದಲ್ಲಿಯೇ ಇಂತಹ ಒಂದು ಬೆಳವಣಿಗೆ ಇದೇ ಮೊದಲ ಬಾರಿ ಆಗಿದೆ ಎಂದು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋವನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಡಾ ಲೂಯಿಸ್ ಎ ಡಯಾಝ್ ಜೆ ಹೇಳಿದ್ದಾರೆ.
ಈ ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗವಹಿಸಿದ್ದ ರೋಗಿಗಳೆಲ್ಲರೂ ಈ ಹಿಂದೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲೆಂದು ಕಿಮೋಥೆರಪಿ, ರೇಡಿಯೇಷನ್‌ಸಹಿತ ಶಸ್ತ್ರಕ್ರಿಯೆಗೂ ಒಳಗಾಗಿದ್ದರು. ಇದೀಗ ಎಲ್ಲರೂ ಕ್ಯಾನ್ಸರ್ ಮುಕ್ತರಾಗಿರುವುದರು ಅಚ್ಚರಿ ಮೂಡಿಸಿದೆಯಲ್ಲದೆ ವೈದ್ಯಕೀಯ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದೆ. ಈ ಪ್ರಾಯೋಗಿಕ ಔಷಧಿಯಿಂದ ಯಾವುದೇ ರೋಗಿ ಕೂಡ ಹೆಚ್ಚು ಅಡ್ಡ ಪರಿಣಾಮ ಎದುರಿಸಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಕ್ಯಾನ್ಸರ್ ಮುಕ್ತರಾಗಿದ್ದೇವೆ ಎಂದು ತಿಳಿಯುತ್ತಲೇ ಎಲ್ಲರೂ ಆನಂದಬಾಷ್ಪ ಸುರಿಸಿದ್ದಾರೆ. ಈ ಟ್ರಯಲ್ ಭಾಗವಾಗಿ ಎಲ್ಲರೂ ಪ್ರತಿ ಮೂರು ವಾರಗಳಿಗೊಮ್ಮೆ ಡೋಸ್ಟರ್‍ಲಿಮಾಬ್ ಔಷಧಿಯನ್ನು ಆರು ತಿಂಗಳ ಅವಧಿಗೆ ತೆಗೆದುಕೊಂಡಿದ್ದರು. ಎಲ್ಲರೂ ಒಂದೇ ಹಂತದ ಕ್ಯಾನ್ಸರ್ ಹೊಂದಿದ್ದರು ಹಾಗೂ ಇತರ ಅಂಗಗಳಿಗೆ ಕ್ಯಾನ್ಸರ್ ಹರಡಿರಲಿಲ್ಲ.
ಈ ಕ್ಲಿನಿಕಲ್ ಟ್ರಯಲ್ ಆಶಾಭಾವನೆ ಮೂಡಿಸಿದೆಯಾದರೂ ದೊಡ್ಡ ಮಟ್ಟದಲ್ಲಿ ಇಂತಹ ಪ್ರಯೋಗ ನಡೆದರೆ ಅದರ ಸಫಲತೆಯನ್ನು ಅಂದಾಜಿಸಬಹುದು ಎಂದು ಕ್ಯಾನ್ಸರ್ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.