ಬೆಂಗಳೂರು, ಮಾ.11- ಬೆಂಗಳೂರು ಹೊರವಲಯದ ಬಿಡದಿ ಬಳಿಯ ಮನೆಯೊಂದರಲ್ಲಿ 25 ಕ್ಕೂ ಮನುಷ್ಯರ ತಲೆಬುರುಡೆಗಳು ಪತ್ತೆಯಾಗಿವೆ.ಈ ಬೆಳವಣಿಗೆ ಆ ಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ.
ಇಷ್ಟೊಂದು ತಲೆ ಬುರುಡೆಗಳು ಹೇಗೆ ಬಂದವು. ಇವೆಲ್ಲಾ ಯಾವ ಕಾರಣಕ್ಕಾಗಿ ಇಟ್ಟುಕೊಳ್ಳಲಾಗಿದೆ ಎಂಬ ಕುತೂಹಲ ಮೂಡಿಸಿದೆ.
ಜೋಗನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಬಲರಾಮ್ ಎಂಬ ವ್ಯಕ್ತಿ ತಲೆ ಬುರುಡೆ ಸಂಗ್ರಹ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದರು.
ಈ ವೇಳೆ ಬಲರಾಮ್ ತಲೆ ಬುರಡೆಗಳನ್ನು ಸಂಗ್ರಹಿಸಿ ಅವುಗಳಿಂದ ಮಾಟ-ಮಂತ್ರ ಮಾಡುತ್ತಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮನುಷ್ಯನ ಬುರುಡೆಗಳನ್ನು ಸಂಗ್ರಹಿಸಿರುವ ಬಲರಾಮ್ ಮಾಟ-ಮಂತ್ರ ಮಾಡುವ ಜೊತೆಗೆ, ರಾತ್ರಿ ಸ್ಮಶಾನದಲ್ಲಿ ಬುರುಡೆ ಪೂಜೆ ಮಾಡುತ್ತಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
ಗ್ರಾಮಸ್ಥರ ದೂರಿನ ಮೇರೆಗೆ ತೋಟದ ಮನೆಗೆ ಭೇಟಿ ನೀಡಿದಾಗ, ಬುರುಡೆಗಳು ಹಾಗೂ ಮೂಳೆಗಳು ಪತ್ತೆಯಾಗಿವೆ. ಭದ್ರಕಾಳಿ ಫೋಟೊ, ಹೋಮಕುಂಡದ ಸುತ್ತ ಬುರುಡೆಗಳನ್ನು ಜೋಡಿಸಿ ಪೂಜೆ ಮಾಡಲಾಗಿದೆ. ಬಲರಾಮ್ ನನ್ನು ವಶಕ್ಕೆ ಪಡೆಯಲಾಗಿದೆ. ಈತ ಕೆಲ ವರ್ಷಗಳಿಂದ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಮನೆಗೆ ಭೇಟಿ ನೀಡಿದಾಗ ಕಂಡುಬಂದ ಬುರುಡೆಗಳು ಮತ್ತು ಮೂಳೆಗಳ ವಿಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿವೆ.