ಬೆಂಗಳೂರು, ಎ29: ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದೆ.ಠಾಣೆಯಲ್ಲಿ ದೂರು ದಾಖಲಿಸಿದ ಸಂತ್ರಸ್ತ ಮಹಿಳೆಯಿಂದ ಎಸ್‌ಐಟಿ ತಂಡ ಹೇಳಿಕೆ ಪಡೆಯಲು ಮುಂದಾಗಿದೆ.
ಇದರ ನಡುವೆ ಪ್ರಕರಣದ ಕುರಿತು ತ್ವರಿತಗತಿಯಲ್ಲಿ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಎಸ್ಐಟಿಗೆ ಸೂಚಿಸಲಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು,ಸಿಐಡಿ ಪೊಲೀಸ್ ಎಡಿಜಿಪಿ ಬಿ.ಕೆ.ಸಿಂಗ್ ನೇತೃತ್ವದ ವಿಶೇಷ ತಂಡ ಪ್ರಕರಣದ ತನಿಖೆಯನ್ನು ಕೈಗೊಂಡಿದೆ. ಹಲವೆಡೆ ಹಂಚಿಕೆಯಾಗಿರು ಪೆನ್‌ಡ್ರೈವ್‌ಗಳನ್ನು ವಶಪಡಿಸಿಕೊಂಡು ವೈಜ್ಞಾನಿಕ ವರದಿಗಾಗಿ ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ. ಸಾಕ್ಷಿಗಳ ಹೇಳಿಕೆಯನ್ನು ಪಡೆಯಲಿದ್ದಾರೆ’ ಎಂದರು.
ಎಸ್ಐಟಿ ತಂಡವು ಮುಕ್ತವಾಗಿ ಕೆಲಸ ಮಾಡಲಿದೆ. ಪ್ರಕರಣದ ವರದಿ ಸಲ್ಲಿಸಲು ಯಾವುದೇ ರೀತಿಯ ಸಮಯ ನಿಗದಿಪಡಿಸಿಲ್ಲ. ತನಿಖೆ ವಿಳಂಬ ಆಗಬಾರದು ಎಂಬ ದೃಷ್ಟಿಯಿಂದ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಮೌಖಿಕವಾಗಿ ತಿಳಿಸಲಾಗಿದೆ. ವರದಿಯನ್ನು ನಾಳೆಯೇ ಕೊಡಿ, ನಾಡಿದ್ದು ಕೊಡಿ ಎಂದು ದಿನ ನಿಗದಿಪಡಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.
ಮಹಿಳಾ ಆಯೋಗವು ಬರೆದ ಪತ್ರದ ಆಧಾರದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ರೀತಿಯ ದೂರುಗಳನ್ನು ಎಸ್‌ಐಟಿ ಪಡೆಯಲಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಸ್‌ಐಟಿ ಕೆಲಸ ಮಾಡಲಿದೆ. ಸಂತ್ರಸ್ತರಿಗೆ ಜೀವ ಭಯವಿದ್ದರೆ ಪೊಲೀಸ್ ಭದ್ರತೆ ನೀಡಲಾಗುವುದು’ ಎಂದು ತಿಳಿಸಿದರು.
ತನಿಖೆ ಚುರುಕು:
ಮತ್ತೊಂದೆಡೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಬಿಕೆ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡ ಹಾಸನಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಮುಂದಾಗಿದೆ ದೂರು ದಾಖಲಾಗಿರುವ ಪೊಲೀಸ್ ಠಾಣೆಯಿಂದ ಎಫ್ಐಆರ್ ಪ್ರತಿಯನ್ನು ಪಡೆಯಲಿರುವ ತಂಡ ಆನಂತರ ಸ್ಥಳ ಪರಿಶೀಲನೆ ನಡೆಸಲಿದೆ.
ಪ್ರಕರಣದಲ್ಲಿ ಬಹುಮುಖ್ಯ ಸಾಕ್ಷಿಯಾಗಿರುವ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಮೊಬೈಲ್ ಫೋನ್‌ನನ್ನು ಎಸ್ಐಟಿ ಪತ್ತೆ ಹಚ್ಚಲಿದೆ. ಮೊಬೈಲ್ ಫೋನ್ ಯಾರದ್ದು, ಯಾರ ಹೆಸರಲ್ಲಿದೆ. ಮೊಬೈಲ್ ನಲ್ಲಿ ಎಷ್ಟು ವಿಡಿಯೋ ಇವೆ..? ಎಷ್ಟು ದಿನಗಳಿಂದ ಇವೆ..? ಮೊಬೈಲ್ ನಲ್ಲಿರುವ ವಿಡಿಯೋಗಳು ಅಸಲಿನಾ..? ಎಡಿಟ್ ಮಾಡಲಾಗಿದೆಯಾ..? ಎಂಬ ಮಾಹಿತಿಯನ್ನು ಕಲೆ ಹಾಕಲಿದೆ.
ಮೊಬೈಲ್ ನಲ್ಲಿರುವ ಮಾಹಿತಿಯ ಎಫ್ಎಸ್ಎಲ್ ವರದಿ ಬಂದ ಬಳಿಕ ಅಸಲಿ ತನಿಖೆಯ ವೇಗ ಹೆಚ್ಚಲಿದೆ ಎಂದು ಮೂಲಗಳು ತಿಳಿಸಿವೆ.
ಹೆದರುವುದಿಲ್ಲ:
ಪ್ರಕರಣ ಬೆಳಕಿಗೆ ಬಂದ ನಂತರ ಮೊಟ್ಟ ಮೊದಲ ಬಾರಿಗೆ ಮೌನ ಮುರಿದಿರುವ ಮಾಜಿ ಸಚಿವ ಹಾಗೂ ಸಂಸದ ಪ್ರಜ್ವಲ್ ಅವರ ತಂದೆ ಎಚ್ ಡಿ ರೇವಣ್ಣ,ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ನಡೆದಿದ್ದು, ಇದಕ್ಕೆಲ್ಲಾ ಹೆದರುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಕಳೆದ 40 ವರ್ಷಗಳಿಂದಲೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಸಿಓಡಿ, ಲೋಕಾಯುಕ್ತ ಸೇರಿದಂತೆ ಹಲವು ತನಿಖೆಗಳು ನಡೆದಿವೆ.ತನಿಖೆಗಳನ್ನು ನಾವು ಎದುರಿಸಿದ್ದೇವೆ. ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗುವುದು ಮೊದಲೇ ನಿರ್ಧಾರವಾಗಿತ್ತು. ಅವರಿಗೆ ಎಸ್‌ಐಟಿಗೆ ವಹಿಸುವುದಾಗಲೀ, ಎಫ್‌ಐಆರ್ ದಾಖಲಿಸುವುದಾಗಲೀ ಗೊತ್ತಿರಲಿಲ್ಲ ಎಂದರು.
ಪ್ರಕರಣದ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಎಸ್ ಐ ಟಿ ಕರೆದರೆ ಪ್ರಜ್ವಲ್ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದ ಅವರು, ಈ ವಿಚಾರವನ್ನು ದೇವೇಗೌಡರ ಬಳಿ ತಾವು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.