ಮೈಸೂರು, ಅ.07: ಸಮಾಜದಲ್ಲಿನ ಅಸಮಾನತೆ ನಿವಾರಿಸಲು ಜಾತಿವಾರು ಜನಸಂಖ್ಯೆಯ ವಿವರ ಅಗತ್ಯ ಹೀಗಾಗಿ
ಜಾತಿ ಗಣತಿ (Socio-Economic Caste Census) ಸಮಾಜವನ್ನು ವಿಭಜಿಸುವುದಿಲ್ಲ ಬದಲಿಗೆ ಅನ್ಯಾಯ ಸರಿ ಪಡಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಡತನ ನಿವಾರಣೆ ಕಾರ್ಯಕ್ರಮ ರೂಪಿಸುವಾಗ ಸಮ ಸಮಾಜ ನಿರ್ಮಾಣ ಮಾಡಬೇಕು. ಯಾವ ಜಾತಿ ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಆರ್ಥಿಕವಾಗಿ, ಸಾಮಾಜಿಕವಾಗಿ ರಾಜಕೀಯವಾಗಿ ಯಾವ ಸ್ಥಿತಿಗತಿಯಲ್ಲಿದೆ ಎಂದು ತಿಳಿಯಬೇಕು ಇದಕ್ಕಾಗಿ ಜಾತಿ ಗಣತಿ ಅಗತ್ಯ ಎಂದರು.
ನಮ್ಮದು ಜಾತಿ ವ್ಯವಸ್ಥೆಯ ಸಮಾಜವಾಗಿದೆ. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಅಸಮಾನತೆ ಇರುವ ಜಾತಿಗಳನ್ನು ಮುಖ್ಯವಾಹಿನಿಗೆ ತರಲು ಅಂಕಿಅಂಶಗಳು ಅಗತ್ಯ. ಅದಕ್ಕಾಗಿ ಜಾತಿಗಣತಿ ಮಾಡಬೇಕು. ಸಾಮಾಜಿಕ- ಆರ್ಥಿಕ ಸಮೀಕ್ಷೆ ಹಾಗೂ ಜಾತಿ ಸಮೀಕ್ಷೆ ಆಗಬೇಕು. ಇದು ಖಂಡಿತವಾಗಿಯೂ ಸಮಾಜವನ್ನು ಒಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಕಾಂತರಾಜು ಅವರು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವರದಿ ಪಡೆಯಲಿಲ್ಲ. ಈಗ ಬೇರೆ ಅಧ್ಯಕ್ಷ ರಿದ್ದು, ಅವರಿಗೆ ಕಾಂತರಾಜು ವರದಿ ಇದ್ದಂತೆಯೇ ಮಾಡಿಕೊಡುವಂತೆ ಹೇಳಿದ್ದೇನೆ. ಅವರು ನವೆಂಬರ್ ನಲ್ಲಿ ವರದಿ ನೀಡುವುದಾಗಿ ಹೇಳಿದ್ದಾರೆ ಎಂದರು.
ತೀರಾ ಹಿಂದುಳಿದ ಸಮುದಾಯಗಳಿಗೆ ಪ್ರತ್ಯೇಕ ವರ್ಗ ನಿಗಧಿ ಪಡಿಸಲು ಬೇಡಿಕೆ ಕೇಳಿಬಂದಿದೆ ರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ವರ್ಗ ಬೇಕು ಎಂಬ ಆಗ್ರಹವಿದೆ.ಜಾತಿವಾರು ಗಣತಿ ವಿವರ ಬಂದ ನಂತರ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಎಲ್ಲರನ್ನೂ ಒಳಗೊಂಡ ಸಮಾಜ, ಸಬ್ ಕೆ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಮುಸಲ್ಮಾನರಿಗೆ ಟಿಕೆಟ್ ಕೊಡದೆ ಹೋದರೆ ಸಬ್ ಕೆ ಸಾಥ್ ಆಗುತ್ತದೆಯೇ, ಎಲ್ಲರನ್ನೂ ಒಳಗೊಂಡಂತೆ ಆಗುತ್ತದೆಯೇ? ಹೇಳುವುದಕ್ಕೂ, ಮಾಡುವುದಕ್ಕೂ ವ್ಯತ್ಯಾಸವಿದೆ. ಹೇಳೋದು ಬೇರೆ, ವಸ್ತುಸ್ಥಿತಿ ಬೇರೆ ಎಂದರು.
4860 ಕೋಟಿ ನೆರವು:
ರಾಜ್ಯದ ಬರಪೀಡಿತ ಪ್ರದೇಶದಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ 4860 ಕೋಟಿ ರೂಪಾಯಿಗಳ ನೆರವನ್ನು ಕೋರಿದ್ದೇವೆ. ಆದರೆ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸೇರಿ ಒಟ್ಟು 3000೦ ಕೋಟಿ ರೂ.ಗಳಿಗೂ ನಷ್ಟ ಉಂಟಾಗಿದೆ. ಎನ್. ಡಿ.ಆರ್.ಎಫ್ ನಿಯಮಗಳ ಪ್ರಕಾರ 4860 ಕೋಟಿ ರೂ.ಗಳನ್ನು ಕವೆ ಎಂದು ತಿಳಿಸಿದರು
ಕೇಂದ್ರ ಬರ ಅಧ್ಯಯನ ತಂಡ ಮೂರು ತಂಡಗಳಾಗಿ 11 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಅವರು ವರದಿ ನೀಡಿದ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಹಾರ ನಿಗದಿ ಮಾಡಲಿದೆ ಎಂದರು