ಕೊಡಗು,ಫೆ.13-
ಹಾಡಹಗಲೇ ಹದಿಹರೆಯದ ಯುವಕನೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ದಾರುಣ ಘಟನೆ ಪೊನ್ನಂಪೇಟೆ (Ponnampet, Kodagu) ತಾಲೂಕಿನ ಕುಟ್ಟ ಸಮೀಪದ ಪಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ವೀರಹೊಸನಹಳ್ಳಿಯ ಸೊಳ್ಳೆಪುರದ ಚೇತನ್ (18) ಮೃತಪಟ್ಟವರು. ಮಗನನ್ನು ಹುಡುಕಲು ಹೋಗಿದ್ದಾಗ ತಂದೆ ಮೇಲೂ ಹುಲಿ ದಾಳಿ ನಡೆಸಿದ್ದು, ಅದೃಷ್ಟವಶಾತ್ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕುಟ್ಟ ಸಮೀಪದ ನಾಲರಿಯ ಎನ್.ಪೂಣಚ್ಚ ಎಂಬವರಿಗೆ ಸೇರಿದ ತೋಟಕ್ಕೆ ಕಾಫಿ ಕೊಯ್ಲು ಮಾಡಲು ಚೇತನ್ ಬಂದಿದ್ದು, ನಿನ್ನೆ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಹುಲಿ ಮೈಮೇಲೆ ಎರಗಿತ್ತು. ತೋಟದ ಸಮೀಪ ಹುಲಿ ನಡೆಸಿದ ದಾಳಿಗೆ ಚೇತನ್ ಸಾವಿಗೀಡಾಗಿದ್ದ.
ಚೇತನ್ ಮೈಸೂರು ಜಿಲ್ಲೆಯ ಪಂಚವಳ್ಳಿ ಗ್ರಾಮದ ಯುವಕಯಾಗಿದ್ದು ಪೊನ್ನಂಪೇಟೆ ತಾಲೂಕಿನ ಚೂರಿಕಾಡು ಬಳಿ ನಿನ್ನೆ ನಡೆದ ಹುಲಿ ದಾಳಿಯಲ್ಲಿ ಬಲಿಯಾಗಿದ್ದಾನೆ. ನಿನ್ನೆ ಚೇತನ್ ತಂದೆಯ ಮೇಲೂ ವ್ಯಾಘ್ರ ಎರಗಿತ್ತು. ಆದರೆ ಅದೃಷ್ಟವಶಾತ್ ತಂದೆ ಮಧು ಹುಲಿ ಬಾಯಿಂದ ತಪ್ಪಿಸಿಕೊಂಡು ಬಂದಿದ್ದರು. ಮಗನನ್ನು ಹುಡುಕುವ ಸಂದರ್ಭ ಹುಲಿ ದಾಳಿ ಮಾಡಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಮಧು ಪಾರಾಗಿದ್ದಾರೆ. ಮೃತ ಯುವಕನ ಕುಟುಂಬಕ್ಕೆ ಅರಣ್ಯಾಧಿಕಾರಿಗಳು ಪರಿಹಾರ ರೂಪದಲ್ಲಿ 2.50 ಲಕ್ಷದ ಚೆಕ್ ವಿತರಣೆ ಮಾಡಿದ್ದಾರೆ. ಒಟ್ಟು 15 ಲಕ್ಷ ಪರಿಹಾರದ ಭರವಸೆ ನೀಡಲಾಗಿದೆ. ಸದ್ಯ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.