ಬೆಂಗಳೂರು,ಜೂ.29-ಅಪಘಾತಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್ ಸೇರಿ ಇತರ ಕೃಷಿ ವಾಹನಗಳ ಸಂಚಾರಕ್ಕೆ ನಿಷೇಧ ಬೀಳಲಿದೆ. ಜುಲೈ ಎರಡನೇ ವಾರ ನಂತರ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್ ಸೇರಿ ಇತರ ಕೃಷಿ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೇಳಿದ್ದಾರೆ.
ಈ ವಾಹನಗಳ ನಿಷೇಧದ ಕುರಿತಾಗಿ ಶೀಘ್ರವೇ ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಇದು ಮುಂದಿನ 10 ರಿಂದ 15 ದಿನಗಳ ಒಳಗೆ ಜಾರಿಯಾಗಬಹುದು. ಮಾರ್ಚ್‌ನಲ್ಲಿ ಪ್ರಧಾನಿಯಿಂದ ಅಧಿಕೃತವಾಗಿ ಉದ್ಘಾಟನೆಯಾಗಿದ್ದ ಈ ರಸ್ತೆ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದ್ದು, ಈ ಹೆದ್ದಾರಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಮಂದಿ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಕೇವಲ 90 ನಿಮಿಷಗಳಲ್ಲಿ ಬೆಂಗಳೂರಿನಿಂದ ಮೈಸೂರಿಗೆ ತಲುಪಲು ಪ್ರಯಾಣಿಕರಿಗೆ ಸಹಾಯ ಮಾಡುವ 119-ಕಿಮೀ ಉದ್ದದ ಈ ಹೆದ್ದಾರಿಯಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿಷೇಧಿಸಲು ಚರ್ಚೆಗಳು ನಡೆದಿವೆ, ಈ ವಾಹನಗಳು ಪ್ರತಿ ಗಂಟೆಗೆ 120 ಕಿ.ಮೀ. ವೇಗದಲ್ಲಿ ಚಲಿಸುವ ಇತರ ವಾಹನಗಳಿಗೆ ಅಡೆತಡಯನ್ನುಂಟು ಮಾಡುತ್ತವೆಂದು ಹೇಳಲಾಗಿದೆ.
ದೆಹಲಿ-ಮೀರತ್ ಮತ್ತು ದೆಹಲಿ-ವಡೋದರಾ ಎಕ್ಸ್‌ಪ್ರೆಸ್‌ವೇಗಳ ಮಾರ್ಗದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನ ನಿಷೇಧಿಸಿದಂತೆಯೇ ಇಲ್ಲಿ ಸಹ ನಿಷೇಧ ಮಾಡಲಾಗುವುದು. ಸೂಚನೆ ಬಂದ ತಕ್ಷಣವೇ ನಿಷೇಧವನ್ನು ಜಾರಿಗೊಳಿಸಲಾಗುವುದು. ಮೇಲಿನ ಎಲ್ಲಾ ಪ್ರಕ್ರಿಯೆಗಳು 10-15 ದಿನಗಳ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೇಳಿದ್ದಾರೆ.
ಸೂಪರ್ ಬೈಕ್‌ಗಳಿಗೆ ಮಾತ್ರ ಈ ಹೆದ್ದಾರಿಯಲ್ಲಿ ಸಂಚರಿಸಲು ಅವಕಾಶ ನೀಡಬಹುದೆಂದು ವಿಚಾರ ಮಾಡಲಾಗಿತ್ತು. ಆದರೆ ಬೈಕ್ ಚಲಾಯಿಸುವವರು ಹೆಚ್ಚಾಗಿ ರಸ್ತೆಯಲ್ಲಿ ಶಿಸ್ತನ್ನು ಅನುಸರಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರಿಂದ ಅವುಗಳನ್ನು ಸಹ ನಿಷೇಧಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
Previous Articleರೇಣುಕಾಚಾರ್ಯರಿಗೆ BJP ಅಧ್ಯಕ್ಷ ಆಗಬೇಕಂತೆ
Next Article ತಹಶಿಲ್ದಾರ್ ಬಳಿ ಸಾವಿರ ಕೋಟಿ ಸಂಪತ್ತು