ವಾಷಿಂಗ್ಟನ್,
ಮಾದಕ ವಸ್ತುಗಳ ತಯಾರಿಕೆ ಸಾಗಾಣಿಕೆ ಮತ್ತು ಮಾರಾಟ ಹಾಗೂ ಭಯೋತ್ಪಾದನೆಗೆ ನೆರವು ನೀಡಿದ ಆರೋಪಕ್ಕೆ ಸಿಲುಕಿರುವ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಅಮೆರಿಕ ಬಂಧಿಸಿ ಇದೀಗ ಜೈಲಿಗೆ ತಳ್ಳಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಪ್ಪು ಚಿನ್ನ ಎಂದರೆ ಪರಿಗಣಿಸಲ್ಪಡುವ ತೈಲ ನಿಕ್ಷೇಪದ ಸಿರಿವಂತ ರಾಷ್ಟ್ರವಾಗಿರುವ ವೆನೆಜುವೆಲಾ ಮೊದಲಿನಿಂದಲೂ ಅಮೆರಿಕಕ್ಕೆ ಸೆಡ್ಡು ಹೊಡೆದು ಕಾರ್ಯನಿರ್ವಹಿಸುತ್ತಿತ್ತು. ಜಗತ್ತಿನಾದ್ಯಂತ ಮನ್ನಣೆ ಗಳಿಸಿರುವ ಅಮೆರಿಕ ಕರೆನ್ಸಿ ಬಗ್ಗೆ ತಿರಸ್ಕಾರ ಮನೋಭಾವ ಹೊಂದಿದ್ದ ವೆನೆಜುವೆಲಾ ಡಾಲರ್ ಬದಲಾಗಿ ಚೈನಾ ಹಣವನ್ನು ಮಾನ್ಯ ಮಾಡುತ್ತಿತ್ತು ಇಂತಹ ದೇಶದ ವಿರುದ್ಧ ಅಮೆರಿಕಾ ಸಾರಿರುವ ಸಮರ ಇದೀಗ ಜಗತ್ತಿನಾದ್ಯಂತ ದೊಡ್ಡ ಸುದ್ದಿ ಮಾಡುತ್ತಿದೆ. ಇದರ ನಡುವೆಯೇ ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರನ್ನು ಸರಿ ರಾತ್ರಿಯಲ್ಲಿ ಹೇಗೆ ಅವರ ಮನೆಯಿಂದಲೇ ಸೆರೆ ಹಿಡಿಯಲಾಯಿತು ಎಂಬ ವಿಚಾರ ಕೂಡ ಸಾಕಷ್ಟು ಚರ್ಚೆಯಲ್ಲಿದೆ ವೆನೆಜುವೆಲಾ ಅಧ್ಯಕ್ಷರ ಮನೆ ಭೇದಿಸಲು ಅಸಾಧ್ಯವಾದ ಅತ್ಯಂತ ಭದ್ರಕೋಟೆಯಾಗಿತ್ತು ಇಂತಹ ಕೋಟೆಯನ್ನು ಭೇದಿಸಿ ಹೇಗೆ ಅವರನ್ನು ಸೆರೆ ಹಿಡಿದು ವಾಷಿಂಗ್ಟನ್ ಗೆ ಕರೆ ತರಲಾಯಿತು ಎನ್ನುವ ವಿಚಾರ ಕೂಡ ಅತ್ಯಂತ ಕುತೂಹಲ ಹಾಗೂ ರೋಚಕ.
ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಅವರ ‘ಭದ್ರಕೋಟೆ’ ಭೇದಿಸಲು ಅಮೆರಿಕ ಸೇನೆಯ ‘ಡೆಲ್ಟಾ’ ಪಡೆ 2025ರ ಸೆಪ್ಟೆಂಬರ್‌ನಿಂದಲೇ ವೆನುಜುವೆಲಾ ಕರಾವಳಿಯಲ್ಲಿ ತರಬೇತಿ ನಡೆಸಿತ್ತು. ಇಡೀ ಕಾರ್ಯಾಚರಣೆ ಅತ್ಯಂತ ರಹಸ್ಯವಾಗಿ ‘ಕತ್ತಲ ಮರೆ’ಯಲ್ಲಿ ನಡೆಯುವಂತೆ ಯೋಜನೆ ರೂಪಿಸಲಾಗಿತ್ತು.
ಅಮೆರಿಕಾ ಗುಪ್ತದಳ ಸಿಐಎ ಮಡೂರೊ ಅವರ ಆಹಾರದಿಂದ ನಿದ್ರೆಯವರೆಗೆ, ಅವರ ಸಾಕು ಪ್ರಾಣಿಗಳಿಂದ, ಧರಿಸುವ ಬಟ್ಟೆಯವರೆಗೆ ಪ್ರತಿಯೊಂದರ ಬಗ್ಗೆಯೂ ಇಂಚಿಂಚೂ ಮಾಹಿತಿ ಸಂಗ್ರಹಿಸಿತ್ತು.
ಮಡೂರೊ ನಿವಾಸ ಮತ್ತು ಆವರಣದ ಪ್ರತಿಕೃತಿ ನಿರ್ಮಿಸಿಕೊಂಡಿದ್ದ ಡೆಲ್ಟಾ ಪಡೆಯು, ಈ ಕೋಟೆಗೆ ನುಗ್ಗಿ, ಅವರನ್ನು ಸೆರೆ ಹಿಡಿದು ಹೊರಗೆ ತರುವುದನ್ನು ರಹಸ್ಯವಾಗಿ ತಾಲೀಮು ನಡೆಸಿತ್ತು . ಒಂದು ವೇಳೆ ಮಡೂರೊ ತನ್ನ ಕೋಟೆಯೊಳಗಿನ ರಹಸ್ಯ ಕೊಠಡಿ ಸೇರಿಕೊಂಡರೆ, ಅದನ್ನು ಸ್ಫೋಟಿಸಲೂ ಯೋಜನೆ ರೂಪಿಸಿತ್ತು. ವಿಮಾನಗಳ ಪೈಲಟ್‌ಗಳು ಕತ್ತಲಲ್ಲಿ, ಪ್ರತಿಕೂಲ ಹವಾಮಾನದಲ್ಲೂ ಹಾರಾಟ ನಡೆಸುವುದರ ಬಗ್ಗೆ ತರಬೇತಿ ಪಡೆದುಕೊಂಡಿದ್ದರು.
ತಿಂಗಳುಗಳು ನಡೆದ ರಹಸ್ಯ ಕಾರ್ಯಾಚರಣೆಗೆ ಜನವರಿ 2ರ ತಡರಾತ್ರಿ ಮುಹೂರ್ತ ನಿಗದಿಯಾಗಿತ್ತು. ಟ್ರಂಪ್ ಅವರಿಂದ ಅಂತಿಮ ಆದೇಶ ಸಿಗುತ್ತಿದ್ದಂತೆಯೇ ಆಗಸಕ್ಕೆ ಚಿಮ್ಮಿದ ಅಮೆರಿಕದ 150 ವಿಮಾನಗಳು ವೆನೆಜುವೆಲಾದ ರಾಜಧಾನಿ ಕರಾಕಸ್ ಅನ್ನು ಕತ್ತಲಲ್ಲಿ ಮುಳುಗಿಸಿದ್ದವು. ಏನಾಗುತ್ತಿದೆ ಎನ್ನುವಷ್ಟರಲ್ಲಿ ಡೆಲ್ಟಾ ತಂಡವು, ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ಸೆರೆ ಹಿಡಿದು, ಕರಾವಳಿಯಲ್ಲಿ ಲಂಗರು ಹಾಕಿದ್ದ ಅಮೆರಿಕದ ಯುದ್ಧನೌಕೆಗೆ ತಂದು ಇಳಿಸಿದ್ದರು. ಒಟ್ಟಾರೆ ಕಾರ್ಯಾಚರಣೆ 2 ಗಂಟೆ 20 ನಿಮಿಷದಲ್ಲಿ ಮುಗಿಯಿತು.
ವೆನೆಜುವೆಲಾ ಅಧ್ಯಕ್ಷರನ್ನು ಬಂಧಿಸಿದ್ದು ಹೇಗೆ ಗೊತ್ತಾ?
Previous Articleಕೊಟ್ಟ ಮಾತಿನಂತೆ ನಡೆದುಕೊಂಡ ಡಿಸಿಎಂ ಡಿ.ಕೆ ಶಿವಕುಮಾರ್
Next Article ಮನೆ ಸುಡಲು ಹೋದವನ ಕತೆ ಏನಾಯ್ತು ಗೊತ್ತಾ?

