ಬೆಂಗಳೂರು:
ಕಾಮಗಾರಿ ಗುತ್ತಿಗೆ ಬಾಕಿ ಪಾವತಿ ಮತ್ತು ಟೆಂಡರ್ ಪ್ರಕ್ರಿಯೆ ಕುರಿತು ರಾಜ್ಯ ಗುತ್ತಿಗೆದಾರರ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ನಗರಾಭಿವೃದ್ಧಿ ಮಂತ್ರಿ ಬೈರತಿ ಸುರೇಶ್ ಗಾಳಿಯಲ್ಲಿ ಗುಂಡು ಹಾರಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುತ್ತಿಗೆದಾರರು ತಮ್ಮ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡದೇ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾಮಗಾರಿಯ ಗುತ್ತಿಗೆಯನ್ನು ನೀಡುವ ವಿಚಾರದಲ್ಲಿ ಸಚಿವರ ಹಸ್ತಕ್ಷೇಪ ಇರುವುದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ ಎಂದು ಹೇಳಿದರು
ಟೆಂಡರ್ ಕೊಡುವುದಕ್ಕೂ ಮಂತ್ರಿಗಳಿಗೂ ಏನು ಸಂಬಂಧ? ಪಾರದರ್ಶಕ ಕಾಯ್ದೆಯಡಿಯೇ ಟೆಂಡರ್ ಪ್ರಕ್ರಿಯೆ ನಡೆಯುತ್ತದೆ. ಅರ್ಹ ಗುತ್ತಿಗೆದಾರರನ್ನು ಅಧಿಕಾರಿಗಳ ತಂಡ ಅಂತಿಮಗೊಳಿಸುತ್ತದೆ ಎಂಬುದು ಸೇರಿದಂತೆ ಇಡೀ ಟೆಂಡರ್ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬುದು ಗುತ್ತಿಗೆದಾರರ ಸಂಘದ ಮಂಜುನಾಥ್ ಅವರಿಗೂ ತಿಳಿದಿದೆ. ಆದಾಗ್ಯೂ, ಪದೇಪದೆ, ಮಂತ್ರಿಗಳ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದಿನಂಪ್ರತಿ ಇದೇ ರೀತಿ ಆರೋಪಗಳನ್ನು ಮಾಡುತ್ತಾ ಬಂದರೆ ಇಲಾಖೆಗಳನ್ನು ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಈ ಪ್ರಕ್ರಿಯೆಗಳಲ್ಲಿ ಯಾರು ಭಾಗಿಯಾಗಿದ್ದಾರೆ ಮತ್ತು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಸಾಕ್ಷ್ಯಾಧಾರಗಳಿದ್ದರೆ ಒದಗಿಸಲಿ ಎಂದುಸವಾಲು ಹಾಕಿದರು.
ವಿನಾಕಾರಣ ಆರೋಪಗಳನ್ನು ಮಾಡುವ ಮೂಲಕ ಗಾಳಿಯಲ್ಲಿ ಗುಂಡುಹಾರಿಸಿ ಸಾರ್ವಜನಿಕ ಜೀವನದಲ್ಲಿರುವವರ ತೇಜೋವಧೆ ಮಾಡುವುದು ಬೇಡ .ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಾಭಿವೃದ್ಧಿ ಇಲಾಖೆಯಿಂದ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಮಂಜುನಾಥ್ ಅವರು ನನ್ನ ಬಳಿ ಮನವಿ ಮಾಡಿದ್ದರು. ಹಣಕಾಸು ಇಲಾಖೆ ಅನುಮೋದನೆ ಪಡೆದು ಹಂತಹಂತವಾಗಿ ಬಾಕಿ ಇರುವ 200 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
Previous Articleರಣವೀರ್ ಸಿಂಗ್ ವಿರುದ್ಧ ಎಫ್ಐಆರ್
Next Article ಇಂಧನ ಮಂತ್ರಿ ಕೆ.ಜೆ.ಜಾರ್ಜ್ ರಾಜೀನಾಮೆ ಎಷ್ಟು ಸತ್ಯ?

