ಮಾಸ್ಕೊ.
ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಜೈಲಿನಲ್ಲಿ ದುರಂತ ಸಾವಿಗೀಡಾಗಿದ್ದರು.ಈ ಸಾವು ಜಗತ್ತಿನ ಹಲವು ರಾಷ್ಟ್ರಗಳ ಗಮನ ಸೆಳೆದಿತ್ತು.
ನವಾಲ್ನಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪ್ರಬಲ ರಾಜಕೀಯ ವಿರೋಧಿ ಆಗಿದ್ದರು.
ಪುಟಿನ್ ಅವರ ನಂತರ ಇವರು ರಷ್ಯಾ ವನ್ನು ಮುನ್ನಡೆಸಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಪುಟಿನ್ ಅವರ ಹಲವು ನಿರ್ಧಾರಗಳನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದ ಇವರನ್ನು ರಷ್ಯಾ ಸರ್ಕಾರ, ಪ್ರಕರಣವೊಂದರಲ್ಲಿ ಬಂಧಿಸಿ ಜೈಲಿಗೆ ತಳ್ಳಿತ್ತು. ಇವರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 19 ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾಗಿದ್ದರು.
ಹೀಗಾಗಿ ಜೈಲಿನಲ್ಲಿದ್ದ ನವಾಲ್ನಿ, 2024ರ ಫೆಬ್ರುವರಿಯಲ್ಲಿ ಜೈಲಿನಲ್ಲೇ ಮೃತಪಟ್ಟಿದ್ದರು ಇವರ ಸಾವಿನ ಬಗ್ಗೆ ಅನೇಕ ರಾಷ್ಟ್ರಗಳು ಸಂಶಯ ವ್ಯಕ್ತಪಡಿಸಿದ್ದವು.
ಹೀಗಾಗಿ ಇವರ ಸಾವಿನ ಕುರಿತಂತೆ ಅಂತರ್ರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ತನಿಖೆ ನಡೆಸಿದ್ದು ವಿಷ ಪ್ರಾಶನದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಜೈಲಿನಲ್ಲಿ, ಮಾರಕ ವಿಷವಿಕ್ಕಿ ರಷ್ಯಾವೇ ಹತ್ಯೆ ಮಾಡಿದೆ’ ಎಂದು ಯೂರೋಪಿನ ಬ್ರಿಟನ್, ಫ್ರಾನ್ಸ್ , ಜರ್ಮನಿ, ಸ್ವೀಡನ್ ಮತ್ತು ನೆದರ್ಲೆಂಡ್ಸ್ ರಾಷ್ಟ್ರಗಳು ಆರೋಪಿಸಿವೆ.
ಜೈಲಿನಲ್ಲಿದ್ದ ಅವರನ್ನು ಹತ್ಯೆ ಮಾಡಲು ದಕ್ಷಿಣ ಅಮೆರಿಕದಲ್ಲಿ ಕಂಡುಬರುವ ‘ಪಾಯಿಸನ್ ಡಾರ್ಟ್ ಕಪ್ಪೆ’ಯ ಚರ್ಮದಲ್ಲಿರುವ ‘ಎಪಿಬ್ಯಾಟಿಡಿನ್’ ಎಂಬ ವಿಷವನ್ನು ಬಳಸಿದೆ. ಮೃತದೇಹದ ಜೈವಿಕ ಮಾದರಿ ಪರಿಶೀಲನೆ ವೇಳೆ ಇದು ದೃಢಪಟ್ಟಿದೆ’ ಎಂದು ಈ ರಾಷ್ಟ್ರಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

