ಬೆಳಗಾವಿ:
ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜಕೀಯ ಹಾಗೂ ಅಪರಾಧ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ 400 ಕೋಟಿ ರೂಪಾಯಿ ಅಪಹರಣ ಪ್ರಕರಣ ಇದೀಗ ಸ್ಪೋಟಕ ತಿರುವು ಪಡೆದುಕೊಂಡಿದೆ.
ರಾಜಕೀಯವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ
ಬೆಳಗಾವಿಯ ಚೋರ್ಲಾ ಘಾಟ್ ಪ್ರದೇಶದಲ್ಲಿ 2025 ರ ಅಕ್ಟೋಬರ್ 25 ರಂದು 2 ಕಂಟೇನರ್‌ಗಳಲ್ಲಿದ್ದ ಸುಮಾರು 400 ಕೋಟಿ ರೂ. ನಗದು ಹಣವನ್ನು ದರೋಡೆ ಮಾಡಲಾಗಿತ್ತು ಎಂದು ಮಹಾರಾಷ್ಟ್ರದ ನಾಸಿಕ್ ಮೂಲದ ಉದ್ಯಮಿ ಸಂದೀಪ್ ದತ್ತಾ ಪಾಟೀಲ್ ಎಂಬುವವರು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು.
ದರೋಡೆಯಾದ ಹಣವು ಗುಜರಾತ್ ಮೂಲದ ಬಿಲ್ಡರ್ ಕಿಶೋರ್ ಸವಲಾ ಸೇಠ್ ಅವರಿಗೆ ಸೇರಿದ್ದು, ಎಂದು ದೂರುದಾರರು ಆಪಾದಿಸುವ ಮೂಲಕ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿತ್ತು.ಈ ಹಣದ ಮೂಲ ಯಾವುದು ಎಂದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ಎಸ್‌ಐಟಿಯ ಅಧಿಕಾರಿಗಳು ಒಂದು ತಿಂಗಳ ಕಾಲ ತನಿಖೆ ನಡೆಸಿ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಬಳಿ ದರೋಡೆ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎಂದು ವರದಿ ಸಲ್ಲಿಸಿದೆ.
ದೂರು ನೀಡಿದ್ದ ಸಂದೀಪ್ ಪಾಟೀಲ್ ಹೇಳಿಕೆಯಲ್ಲಿ ಸ್ಥಳ, ಸಮಯ, ಪ್ರಯಾಣ ಮಾರ್ಗ ಹಾಗೂ ಕರೆ ವಿವರಗಳಲ್ಲಿ ಗಂಭೀರ ವ್ಯತ್ಯಾಸಗಳು ಕಂಡುಬಂದಿವೆ ಎಂಬುದು ಎಸ್‌ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ.
ಇದರ ಆಧಾರವಾಗಿ ಚೋರ್ಲಾ ಘಾಟ್‌ನಲ್ಲಿ ಯಾವುದೇ ದರೋಡೆ ನಡೆದಿಲ್ಲ ಎಂದು ಎಸ್‌ಐಟಿ ಸ್ಪಷ್ಟಪಡಿಸಿದೆ. ಇದೀಗ ಸುಳ್ಳು ದೂರು ಸಲ್ಲಿಸುವ ಮೂಲಕ ಗೊಂದಲ ಸೃಷ್ಟಿಸಿದ ಆರೋಪದ ಮೇರೆಗೆ ಸಂದೀಪ್ ಪಾಟೀಲ್ ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲು ಮುಂದಾಗಿರುವ ಮಹಾರಾಷ್ಟ್ರ ಪೊಲೀಸರು ಪ್ರಕರಣದ ಸಂಬಂಧ ಬಂಧಿಸಲಾಗಿದ್ದ ಹಲವರನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.

