ತಿರುವನಂತಪುರಂ: ವಿವಾದದ ಕಿಚ್ಚು ಹಚ್ಚಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾದ ಮುಂದುವರಿದ ಭಾಗದ ಬಿಡುಗಡೆಗೆ ಕೇರಳ ಸರ್ಕಾರವು ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಿನಿಮಾವನ್ನು ಕೇವಲ ಮನೋರಂಜನೆಯಾಗಿ ನೋಡದೆ, ರಾಜ್ಯದ ಶಾಂತಿ ಮತ್ತು ಸೌಹಾರ್ದತೆಯನ್ನು ಕೆಡಿಸುವ ರಾಜಕೀಯ ಪ್ರೇರಿತ ಸಂಚು ಎಂದು ಪರಿಗಣಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಚಿತ್ರವನ್ನು ಸಂಪೂರ್ಣವಾಗಿ ತಿರಸ್ಕರಿಸುವಂತೆ ಸಾರ್ವಜನಿಕರಿಗೆ ಮುಕ್ತ ಕರೆ ನೀಡಿದ್ದಾರೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, ಕೇರಳವು ದೇಶದಲ್ಲೇ ಅತ್ಯುತ್ತಮ ಕೋಮು ಸಾಮರಸ್ಯಕ್ಕೆ ಹೆಸರಾದ ರಾಜ್ಯವಾಗಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಿನಿಮಾದ ಹೆಸರಿನಲ್ಲಿ ಸುಳ್ಳು ಕಥೆಗಳನ್ನು ಹೆಣೆದು ಒಂದು ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಪ್ರಯತ್ನ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರೇಕ್ಷಕರು ಇಂತಹ ದ್ವೇಷ ಹರಡುವ ಸಿನಿಮಾಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಮೊದಲ ಭಾಗದ ಬಿಡುಗಡೆಯ ಸಂದರ್ಭದಲ್ಲೂ ರಾಜ್ಯದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಇದೀಗ ಎರಡನೇ ಭಾಗವೂ ಸತ್ಯವನ್ನು ಮರೆಮಾಚುವ ಪ್ರಯತ್ನ ಎಂಬುದು ಸರ್ಕಾರದ ವಾದವಾಗಿದೆ. ಕೇರಳದ ಘನತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಕೇರಳ ಸರ್ಕಾರ ಈ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ.

