ಬೆಂಗಳೂರು – ಮಾಜಿ ಪ್ರಧಾನಿ ದೇವೇಗೌಡರ ಸೊಸೆ ಹಾಗೂ ಮಾಜಿ ಸಚಿವ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಅವರ ಪತ್ನಿ ಶ್ರೀಮತಿ ಭವಾನಿ (Bhavani Revanna) ಅವರು ಕಳೆದೊಂದು ವಾರದಿಂದ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ಅವರು ತಮ್ಮ ತವರು ಮನೆ ಕೆ. ಆರ್. ಪೇಟೆಯ ಸಾಲಿಗ್ರಾಮಕ್ಕೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ದ್ವಿಚಕ್ರ ವಾಹನ ಒಂದು ತಗುಲಿ ನಡೆದ ಅಪಘಾತ.ಈ ಘಟನೆ ರಾಜ್ಯಮಟ್ಟದಲ್ಲಿ ಸುದ್ದಿ ಮಾಡಿದೆ.
ಅದಕ್ಕೆ ಪ್ರಮುಖ ಕಾರಣ, ಅಪಘಾತ ನಡೆದ ತಕ್ಷಣ ಕಾರಿನಿಂದ ಇಳಿದು ಬಂದ ಶ್ರೀಮತಿ ಭವಾನಿ ರೇವಣ್ಣ ಅವರು ದ್ವಿಚಕ್ರ ವಾಹನ ಸವಾರನನ್ನು ಕುರಿತು ಆಡಿದ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಯಿತು.ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಕಾರಿಗೆ ದ್ವಿಚಕ್ರ ವಾಹನ ತಗುಲಿದ ಪರಿಣಾಮ ಸಾಕಷ್ಟು ಹಾನಿಯಾಗಿದೆ. ಇದನ್ನು ದುರಸ್ತಿ ಮಾಡಲು ಸುಮಾರು ಐವತ್ತು ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ಹೇಳಿದ ಶ್ರೀಮತಿ ಭವಾನಿ ಅವರು ದ್ವಿಚಕ್ರ ವಾಹನ ಸವಾರನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು ಜಾಲತಾಣಗಳಲ್ಲಿ ಹರಿದಾಡಿದ ಈ ವಿಡಿಯೋ ಗೆ ಸಾಕಷ್ಟು ಪ್ರತಿಕ್ರಿಯೆ ಬಂದಿದ್ದವು.ಅನೇಕ ಮಂದಿ ನೆಟ್ಟಿಗರು ಶ್ರೀಮತಿ ಭವಾನಿ ಅವರ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದಾದ ನಂತರ ಈ ಬಗ್ಗೆ ಶ್ರೀಮತಿ ಭವಾನಿ ಅವರ ಪತಿ ಹಾಗೂ ಶಾಸಕ ರೇವಣ್ಣ ಮತ್ತು ಅವರ ಪುತ್ರ ವಿಧಾನಪರಿಷತ್ ಸದಸ್ಯ ಡಾ.ಸೂರಜ್ವ ಕ್ಷಮೆ ಯಾಚನೆ ಮಾಡಿದರು.
ಇದರೊಂದಿಗೆ ಪ್ರಕರಣ ಬಗೆಹರಿದಂತಾಯಿತು ಎಂದು ಭಾವಿಸುತ್ತಿರುವಾಗಲೇ ನೆಟ್ಟಿಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭವಾನಿ ಅವರು ಅಂದು ಪ್ರಯಾಣಿಸುತ್ತಿದ್ದ ಕಾರಿನ ಕುರಿತಾದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.ಈ ಮಾಹಿತಿ ಕುತೂಹಲಕಾರಿಯಾಗಿದೆ.
ಶ್ರೀಮತಿ ಭವಾನಿ ಅವರು ಪ್ರಯಾಣಿಸುತ್ತಿದ್ದ ಕಾರಿನ ಬ್ರಾಂಡ್ ನೇಮ್ ಟೊಯೋಟಾ ವೆಲ್ಫೈರ್. ಈ ಕಾರು ಆಶ್ಪ್ರಾ ಇನ್ಫ್ರಾ ಇಂಜಿನಿಯರ್ಸ್ ಪ್ರವೈಟ್ ಲಿಮಿಟೆಡ್ ಅನ್ನೋ ಕಂಪನಿ ಹೆಸರಲ್ಲಿ ರಿಜಿಸ್ಟರ್ ಆಗಿದೆ. ಈ ಕಂಪನಿ ಡೈರೆಕ್ಟರ್ಸ್ ಹೆಸರು ಪ್ರಭಾಕರ್ ರೆಡ್ಡಿ ಮತ್ತು ಅಭಿಜಿತ್ ಅಶೋಕ್ ಎಂಬಿಬ್ಬರು ಗುತ್ತಿಗೆದಾರರು. ಇವರು ಬಿಬಿಎಂಪಿ ಕಂಟ್ರಾಕ್ಟರ್ ಗಳು ಎಂಬ ಮಾಹಿತಿ ಹೊರಗೆಡವಿದ್ದಾರೆ.
ಈಗ ಕಾರಿನ ಮಾಲೀಕರಿಗೂ ಎಚ್.ಡಿ.ರೇವಣ್ಣ ಅವರ ಕುಟುಂಬಕ್ಕೂ ಏನು ಸಂಬಂಧ.ಶ್ರೀಮತಿ ಭವಾನಿ ರೇವಣ್ಣ ಅವರು ಈ ಕಾರಿನಲ್ಲಿ ಯಾಕೆ ಪ್ರಯಾಣಿಸುತ್ತಿದ್ದರು ಎಂಬ ಹಲವಾರು ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ.