ಅಧಿಕಾರ ಹಂಚಿಕೆ ಕುರಿತಂತೆ ರಾಜ್ಯ ಕಾಂಗ್ರೆಸ್ಸಿನಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಈ ವಿಚಾರದಲ್ಲಿ ಮಠಾಧೀಶರುಗಳ ಮಧ್ಯಪ್ರವೇಶವಾಗಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕು ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದ ಶ್ರೀಗಳು ಹಾಗೂ ಕುಂಚಿಟಿಗರ ಮಠಾಧೀಶ ನಂಜಾವಧೂತ ಶ್ರೀ ಗಳು ಹೇಳಿದರೆ, ಇದಕ್ಕೆ ಕನಕ ಗುರುಪೀಠದ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರ ಕೊಡಿ:
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಹಾಸನದಲ್ಲಿ ಪ್ರತಿಕ್ರಿಯೆ ನೀಡಿದ್ದ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು, ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುರಿತಾಗಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದ್ದೇನೆ. ನಮ್ಮ ಸಮುದಾಯಕ್ಕೆ ಸೇರಿದ ಡಿಕೆ ಶಿವಕುಮಾರ್ ಅವರ ಪಕ್ಷ ನಿಷ್ಠೆ, ಹಾಗೂ ಪಕ್ಷಕ್ಕೆ ಸಲ್ಲಿಸಿರುವ ಸುಧೀರ್ಘ ಸೇವೆಯನ್ನು ಗಮನಿಸಿ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳುತ್ತದೆ ಎಂಬ ವಿಶ್ವಾಸ ತಮಗಿದೆ ಎಂದು ಹೇಳಿದ್ದರು.
ರಾಜ್ಯದ ಬೆಳವಣಿಗೆಗಳನ್ನು ನಾನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ ಮತ್ತು ಓದುತ್ತಿದ್ದೇನೆ ನಮ್ಮ ಮಠವು ಒಕ್ಕಲಿಗ ಸಮುದಾಯದ ನಂಬಿಕೆಯ ಕೇಂದ್ರವಾಗಿದೆ ಹಾಗೂ ಇತರೆ ಸಮುದಾಯಗಳಿಗೂ ಧ್ವನಿಯಾಗಿದೆ ನಮ್ಮ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದು ಸಮುದಾಯದವರು ಬಯಸುತ್ತಿದ್ದಾರೆ ಆದರೆ ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಅದು ಸಾಧ್ಯವಿಲ್ಲವೇನೋ ಎಂದೆನಿಸುತ್ತಿದೆ ಎಂದು ಹೇಳಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯದ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜನತೆ ಮತ ಚಲಾಯಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ ಈಗ ಎರಡುವರೆ ವರ್ಷಗಳ ಅಧಿಕಾರ ಅವಧಿ ಪೂರ್ಣಗೊಂಡಿದ್ದು ಉಳಿದ ಅವಧಿಗೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಜನತೆ ಬಯಸುತ್ತಿದ್ದು ಅದಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ದರು.
ಕುಂಚಿಟಿಗ ಮಠ:
ಮಾತಿಗೆ ತಪ್ಪಿ ನಡೆದರೆ ಪರಮಾತ್ಮ ಮೆಚ್ಚುವುದಿಲ್ಲ ಎಂದು ಹೇಳಿರುವ ನಂಜಾವಧೂತ ಸ್ವಾಮೀಜಿಗಳು
ಉಳಿದ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಉತ್ತಮ ಆಡಳಿತ ಮಾಡುತ್ತಿದ್ದಾರೆ, 5 ಗ್ಯಾರಂಟಿಗಳನ್ನು ಸಕ್ರಿಯಗೊಳಿಸಿ ಜನರಿಗೆ ಲಾಭವಾಗುವಂತೆ ಮಾಡುತ್ತಿದ್ದಾರೆ.ಅವರ ವಿರುದ್ಧ ಯಾವುದೇ ದೊಡ್ಡ ಆರೋಪಗಳಿಲ್ಲ, ಸರ್ಕಾರ ಚೆನ್ನಾಗಿ ಸಾಗುತ್ತಿದೆ. ಆದರೆ ಸಿದ್ದರಾಮಯ್ಯ ಈಗಾಗಲೇ 7.5 ವರ್ಷ ಸಿಎಂ ಆಗಿ ಸೇವೆ ನೀಡಿದವರು. 2ನೇ ಬಾರಿ ಸಿಎಂ ಆಗುವ ಮುನ್ನ, ಆದ ನ್ಯಾಯ ಪಂಚಾಯಿತಿ ಪ್ರಕಾರ ಎರಡನೇ ಅವಧಿ ಡಿಕೆ ಶಿವಕುಮಾರ್ ಅವರಿಗೆ ನೀಡಬೇಕು ಎಂದು ಕೊಂಡಿದ್ದೇವೆ ಎಂದು ಹೇಳಿದರು.
ಈ ವಿಚಾರವಾಗಿ ಹೈಕಮಾಂಡ್ ಮಾತು ಕೊಟ್ಟಿದ್ದರೆ ಅದನ್ನು ಮರೆಯಬಾರದು, ಅದಕ್ಕೆ ಬದ್ಧರಾಗಿರಬೇಕು. ಕೊಟ್ಟ ಮಾತು ತಪ್ಪಬೇಡಿ, ಉಳಿದ ಅವಧಿಯನ್ನು ಶಿವಕುಮಾರ್ ಅವರಿಗೆ ನೀಡಿ ಎಂದು ಪಕ್ಷದ ಹಿರಿಯರಿಗೆ ಸಮುದಾಯದ ಪರವಾಗಿ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ
ಬೆಳಗಾವಿಯ ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಕೂಡಾ ಡಿಕೆ ಶಿವಕುಮಾರ್ ಪರವಾಗಿ ಬ್ಯಾಟಿಂಗ್ ಮಾಡಿದ್ದು ಅವರಿಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಮೊದಲ ಎರಡೂವರೆ ವರ್ಷಗಳ ಅವಧಿಗೆ ಸಹಕಾರ ನೀಡಿದ್ದಾರೆ. ಈಗ ಸಿದ್ದರಾಮಯ್ಯ ಅವರು ಸ್ವಇಚ್ಛೆಯಿಂದ ಸ್ಥಾನ ತ್ಯಾಗ ಮಾಡಿದರೆ ಸಾರ್ವಜನಿಕರಲ್ಲಿ ಉತ್ತಮ ಮನೋಭಾವ ಮೂಡುತ್ತದೆ. ಇಲ್ಲದಿದ್ದರೆ ಅವರನ್ನು ‘ವಚನಸಭ್ರಷ್ಟ ಸಿದ್ದರಾಮಯ್ಯ’ ಎಂದು ಟೀಕಿಸುವ ಸಾಧ್ಯತೆ ಇದೆ. ಸಿದ್ದರಾಮಯ್ಯ ‘ಮೊಂಡು ಮನುಷ್ಯ’. ಅವರು ಹಟ ಬಿಡಬೇಕೆಂದು ಸ್ವಾಮೀಜಿ ಸಲಹೆ ನೀಡಿದ್ದಾರೆ. ಅಧಿಕಾರ ಹಸ್ತಾಂತರಕ್ಕೆ ಒಪ್ಪದಿದ್ದರೆ, ಸರ್ಕಾರ ಪತನಗೊಳ್ಳುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಶಾಸಕರ ನಿರ್ಧಾರ:
ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್ ಪರವಾಗಿ ಪ್ರಭಾವಿ ಮಠಾಧೀಶರು ಲಾಭಿ ಮಾಡುತ್ತಿರುವುದಕ್ಕೆ ಕನಕಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಮಠಾಧೀಶರು ಹೇಳಿದ ಕೂಡಲೇ ಮುಖ್ಯಮಂತ್ರಿ ಆಗುವ ಅವಕಾಶ ಇದೆಯಾ? ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವುದು ಸಾಂವಿಧಾನಿಕವಾಗಿ ಶಾಸಕರು. ಹಾಗಾಗಿ, ಯಾರು ಸಿಎಂ ಆಗಬೇಕು ಎನ್ನುವುದನ್ನು ಶಾಸಕರು ನಿರ್ಣಯಿಸುತ್ತಾರೆಯೇ ಹೊರತು, ಯಾವುದೇ ಸ್ವಾಮೀಜಿಗಳಲ್ಲ” ಎಂದು ಕಾಗಿನೆಲೆ ಮಠಾಧೀಶ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.
ಕಾಗಿನೆಲೆ ಶಾಖಾಮಠದ ಶ್ರೀಗಳಾದ ಸಿದ್ದರಾಮನಂದ ಮಹಾಪುರಿ ಸ್ವಾಮೀಜಿಗಳು ಕೂಡಾ ಪರೋಕ್ಷವಾಗಿ, ಆದಿಚುಂಚನಗಿರಿ ಶ್ರೀಗಳ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಅಥವಾ ರಾಜಕೀಯದಲ್ಲಿ ನಾಡಿನ ಸ್ವಾಮೀಜಿಗಳು ಮಧ್ಯಪ್ರವೇಶಿಸುವುದು ಸೂಕ್ತವಲ್ಲ. ಗೊಂದಲ ಹುಟ್ಟು ಹಾಕಬಾರದು ಎನ್ನುವುದು ನಮ್ಮ ಆಶಯ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರನ್ನು ಕುರುಬ ಸಮುದಾಯದ ನಾಯಕರು ಎಂದು ನಾವೆಂದೂ ನೋಡಿಲ್ಲ, ಅವರನ್ನು ರಾಜ್ಯದ ಮುಖ್ಯಮಂತ್ರಿಗಳು ಎಂದೇ ನಾವು ಗೌರವಿಸಿದ್ದೇವೆ. ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ರಾಜ್ಯದಲ್ಲಿ ಹಲವಾರು ಸಮುದಾಯಗಳಿಗೆ ಇನ್ನೂ ನ್ಯಾಯ ಸಿಗಲಿಲ್ಲ, ಉನ್ನತ ಹುದ್ದೆಯ ಭಾಗ್ಯ ದೊರಕಿಲ್ಲ. ಸಿದ್ದರಾಮಯ್ಯನವರ ಸಾಮಾಜಿಕ ಬದ್ದತೆಯ ಹಿನ್ನಲೆಯಲ್ಲಿ ನಾವು ಅವರನ್ನು ಬೆಂಬಲಿಸುತ್ತೇವೆ. ಸ್ವಾಮೀಜಿಗಳು, ಒಂದು ಸಮುದಾಯದ ಪರವಾಗಿ ಮಾತನಾಡಬಾರದಾಗಿತ್ತು ಎಂದು ಸಿದ್ದರಾಮನಂದ ಮಹಾಪುರಿ ಸ್ವಾಮೀಜಿಗಳು ಹೇಳಿದ್ದಾರೆ.
Previous Articleಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳ್ಳಭಟ್ಟಿ ತಯಾರಿಕೆ.
Next Article ವರ್ಡ್ ಪವರ್ ಈಸ್ ವರ್ಲ್ಡ್ ಪವರ್: ಡಿಸಿಎಂ ಡಿ.ಕೆ ಶಿವಕುಮಾರ್

