ಬೆಂಗಳೂರು: ಯುವ ಮಾತುಗಾರರ ಶೋಧಕ್ಕೆ ಯುವ ಕಾಂಗ್ರೆಸ್ ಮುಂದಾಗಿದೆ. ಮಾತುಗಾರರನ್ನು ಆಯ್ಕೆ ಮಾಡಲು ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ. ರಾಜ್ಯಮಟ್ಟದ ಈ ಭಾಷಣ ಸ್ಪರ್ಧೆಯಲ್ಲಿ ಗೆಲ್ಲುವ ಮಾತುಗಾರರಿಗೆ ಐಫೋನ್ ಸಿಗಲಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಪಕ್ಷದ ವಕ್ತಾರ ಹುದ್ದೆಯೂ ಸಿಗಲಿದೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್, ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೃಷ್ಣ, ರಾಜ್ಯ ಘಟಕದ ಅಧ್ಯಕ್ಷ ಮೊಹಮದ್ ನಲಪಾಡ್ ಹ್ಯಾರಿಸ್ ಈ ಮಾಹಿತಿ ನೀಡಿದ್ದಾರೆ.
ರಾಜ್ಯದ ಯುವಕರಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ಇಲ್ಲವಾಗಿದೆ. ಹೀಗಾಗಿ ನಾವು ಇಂತಹ ವೇದಿಕೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ರಾಜ್ಯಮಟ್ಟದಲ್ಲಿ ಗೆದ್ದವರಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಶ್ರೀನಿವಾಸ್ ತಿಳಿಸಿದರು.
ಮೊದಲು ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುವುದು. ಅಲ್ಲಿ ಆಯ್ಕೆಯಾದ ಪ್ರಮುಖ ಅಭ್ಯರ್ಥಿಗಳಿಗೆ ಜೂನ್ 18ರಂದು ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಸಲಾಗುವುದು. ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ವಿಜೇತರಾಗುವವರಿಗೆ ಮೊದಲ ಬಹುಮಾನ ಐ ಫೋನ್ 13 ಪ್ರೊ, ಎರಡನೇ ಬಹುಮಾನವಾಗಿ ಐ ಫೋನ್ 13 ಹಾಗೂ ಮೂರನೇ ಬಹುಮಾನವಾಗಿ ಒನ್ ಪ್ಲಸ್ ಫೋನ್ ನೀಡಲಾಗುವುದು. ಜತೆಗೆ ಉತ್ತಮ ಭಾಷಣ ಮಾಡುವ 10 ಮಂದಿಯನ್ನು ಯುವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಲಾಗುವುದು ಎಂದು ನಲಪಾಡ್ ವಿವರಿಸಿದರು.