ಬೆಂಗಳೂರು,ಡಿ.16-
ತಮಗೆ ಅಶ್ಲೀಲ ಮೆಸೇಜ್ ಕಳುಹಿಸಿದರು ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಎ1ಆರೋಪಿಯಾಗಿ ಜೈಲು ಸೇರಿದ್ದ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾಗಿದ್ದಾರೆ.
ಹೈಕೋರ್ಟ್ ಇವರಿಗೆ ಜಾಮೀನು ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಎಲ್ಲಾ ಷರತ್ತುಗಳನ್ನು ಪೂರ್ಣಗೊಳಿಸಿದ ಅವರು ಜೈಲಿನಿಂದ ಹೊರಬಂದರು.
ಕೊಲೆ ಪ್ರಕರಣದಲ್ಲಿ 6 ತಿಂಗಳ ಹಿಂದೆ ಜೈಲು ಸೇರಿದ್ದ ದರ್ಶನ್ ಗೆಳತಿ ಪವಿತ್ರಾ ಗೌಡ ಮತ್ತು ಇತರರಿಗೆ ಎರಡು ದಿನಗಳ ಹಿಂದೆ ಹೈಕೋರ್ಟ್‌ನ ನ್ಯಾ. ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಷರತ್ತು ಪೂರ್ಣಗೊಂಡು ಕಾನೂನು ಪ್ರಕ್ರಿಯೆಗಳು ಮುಗಿದ ಬೆನ್ನಲ್ಲೇ ಪರಪ್ಪನ ಅಗ್ರಹಾರದಿಂದ ಪವಿತ್ರಾ, ಅನುಕುಮಾರ್, ಪ್ರದೂಶ್ ಬಿಡುಗಡೆ ಮಾಡಲಾಯಿತು.
ಇನ್ನೂ ಶಿವಮೊಗ್ಗ ಜೈಲಿನಿಂದ ಜಗದೀಶ್, ಲಕ್ಷಣ್, ಕಲಬುರಗಿಯಿಂದ ನಾಗರಾಜ್ ರಿಲೀಸ್ ಆಗಲಿದ್ದಾರೆ. ಮಧ್ಯಾಹ್ನ ಎಲ್ಲಾ ಆರೋಪಿಗಳು ಜೈಲಿನಿಂದ ಹೊರಬರಲಿದ್ದಾರೆ.
ಎಲ್ಲಾ ಆರೋಪಿಗಳು ತಲಾ 1 ಲಕ್ಷ ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ನೀಡಬೇಕು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಿದೆ.
ಆರೋಪಿಗಳನ್ನು ಬಂಧಿಸಿದ ನಂತರ ಪ್ರಾಸಿಕ್ಯೂಷನ್ ತಕ್ಷಣವೇ ಇವರನ್ನು ಏಕೆ ಬಂದಿಸಿದ್ದೇವೆ ಎನ್ನುವುದಕ್ಕೆ ಸರಿಯಾದ ಕಾರಣ ನೀಡಿಲ್ಲ. ಹೀಗಾಗಿ ಕಾನೂನಿನ ಈ ಲೋಪದ ಆಧಾರದಡಿ ಎಲ್ಲರ ಜಾಮೀನು ಅರ್ಜಿಗಳನ್ನು ಪುರಸ್ಕರಿಸಲಾಗುತ್ತಿದೆ ಎಂದು ನ್ಯಾಯಪೀಠ ತನ್ನ 68 ಪುಟಗಳ ತೀರ್ಪಿನಲ್ಲಿ ಹೇಳಿತ್ತು
Previous Articleಪಂಚಮಸಾಲಿ ಶ್ರೀ ಗಳು ಸುಪಾರಿ ಪಡೆದಿದ್ದಾರಾ..?
Next Article ಮೊಬೈಲ್ ಕಳ್ಳರನ್ನು ಚೇಸ್ ಮಾಡಿದ ಮಾಜಿ ಕಾರ್ಪೊರೇಟರ್.