ಬೆಂಗಳೂರು,ಜು.22-
ಡೆಂಗ್ಯೂ,ಮಲೇರಿಯಾ ಸೇರಿದಂತೆ ವಿವಿಧ ಖಾಯಿಲೆಗಳಿಗೆ ಅಗತ್ಯವಿರುವ ಔಷಧ ದಾಸ್ತಾನು ಮಾಡಲಾಗಿದೆ.ರಾಜ್ಯದಲ್ಲಿ ಎಲ್ಲಿಯೂ ಔಷಧಿಗಳ ಕೊರತೆ ಉಂಟಾಗಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ
ಪ್ರಶ್ನೋತ್ತರ ವೇಳೆಯಲ್ಲಿ ಪಿ.ಎಸ್.ನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಸರ್ಕಾರಿ ಆಸ್ಪತ್ರೆಗಳಿಗೆ ಎಷ್ಟು ಬೇಡಿಕೆ ಇದೆಯೋ ಅಷ್ಟನ್ನು ಪೂರೈಕೆ ಮಾಡಿದ್ದೇವೆ ಯಾವುದೇ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಉಂಟಾಗದಂತೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ
ಎಂದು ಹೇಳಿದರು.
ಲಭ್ಯತೆ ಆಧಾರದ ಮೇಲೆ ಪೂರೈಕೆ ಮಾಡುತ್ತಿದ್ದೇವೆ. ಒಂದು ವೇಳೆ ನಿರ್ಧಿಷ್ಟ ಕಡೆ ಕೊರತೆ ಇದ್ದರೆ ನಮ್ಮ ಗಮನಕ್ಕೆ ತಂದರೆ ತತ್‍ಕ್ಷಣವೇ ಪೂರೈಕೆ ಮಾಡುವ ಆಶ್ವಾಸನೆ ನೀಡಿದರು.
ಅರೋಗ್ಯ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡಲು ಇಲಾಖೆ ಮುಂದಾಗಿದೆ. ಈಗಾಗಲೇ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆಯೂ ಮಾತುಕತೆ ನಡೆಸಿದ್ದೇವೆ. ಅನುಮೋದನೆ ಸಿಕ್ಕ ತಕ್ಷಣ ಹುದ್ದೆಗಳ ಭರ್ತಿಗೆ ಮುಂದಾಗುತ್ತೇವೆ ಎಂದು ತಿಳಿಸಿದರು.
ಇನ್ನು ಮುಂದೆ ಇಲಾಖೆ ಅಧಿಕಾರಿಗಳು ಎಲ್ಲೇ ಕೆಲಸ ಮಾಡಿದರೂ ಲಾಗಿನ್ ಆಗುವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ. ಅದು ಗ್ರಾಮೀಣ ಭಾಗದಿಂದ ಹಿಡಿದು ಬೆಂಗಳೂರಿನವರೆಗೂ ಜಾರಿಯಲ್ಲಿರುತ್ತದೆ. ಸಿಬ್ಬಂದಿಗಳು ಕಡ್ಡಾಯವಾಗಿ ಕೆಲಸದ ಸಮಯ, ಹಾಜರಾತಿ, ಬೆರಳಚ್ಚು ನೀಡಲೇಬೇಕು. ಇಲ್ಲದಿದ್ದರೆ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಇಲಾಖೆಯಲ್ಲಿ ಮೊದಲ ಬಾರಿಗೆ ಸಿಬ್ಬಂದಿಗಳ ವರ್ಗಾವಣೆಗೆ ಕೌನ್ಸಿಲಿಂಗ್ ವ್ಯವಸ್ಥೆ ಮಾಡಿದ್ದೇವೆ. ಇಲ್ಲಿ ಎಲ್ಲವೂ ಪಾರದರ್ಶಕವಾಗಿ ನಡೆಯುತ್ತದೆ. ಯಾವುದೇ ಕಾರಣಕ್ಕೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ಗುಂಡೂರಾವ್ ಸ್ಪಷ್ಟಪಡಿಸಿದರು