ಬೆಂಗಳೂರು,ಮೇ.1-
ರಾಜ್ಯ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ
ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ನೀಡಿದೆ.
ಕಳೆದ ರಾತ್ರಿ ಹೊಳೆನರಸೀಪುರದಲ್ಲಿರುವ ರೇವಣ್ಣ ಅವರ ನಿವಾಸಕ್ಕೆ ತೆರಳಿದ ತನಿಖಾ ತಂಡದ ಅಧಿಕಾರಿಗಳು ಖುದ್ದು ನೋಟೀಸ್ ನೀಡಲು ಸಿದ್ಧತೆ ನಡೆಸಿದ್ದರು.
ಆದರೆ,ರೇವಣ್ಣ ಈ ವೇಳೆ ಮನೆಯಲ್ಲಿ ಇರಲಿಲ್ಲ, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಮನೆಯ ಬಾಗಿಲಿಗೆ ನೋಟಿಸ್ ಪ್ರತಿಯನ್ನು ಅಂಟಿಸಿ ಎಸ್‌ಐಟಿ ತಂಡ ವಾಪಸ್ಸಾಗಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೋಟಿಸ್‌ನ್ನು ಅಂಟಿಸಲಾಗಿದೆ. ನೋಟಿಸ್‌ನಲ್ಲಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ವಿಶೇಷ ತನಿಖಾ ತಂಡ ನೀಡಿರುವ ನೋಟಿಸ್ ಗೆ ತಮ್ಮ ವಕೀಲರ ಮೂಲಕ ಸ್ಪಷ್ಟನೆ ನೀಡಿರುವ ಸಂಸದ ಪ್ರಜ್ವಲ್ ರೇವಣ್ಣ ತಾವು ವಿದೇಶ ಪ್ರವಾಸದಲ್ಲಿದ್ದು ವಿಚಾರಣೆಗೆ ಹಾಜರಾಗಲು ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ತಮಗೆ ಏಳು ದಿನಗಳ ಕಾಲಾವಕಾಶ ನೀಡಬೇಕು ಎಂದು ಕೋರಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಪರವಾಗಿ ವಕೀಲ ಅರುಣ್ ಎಂಬುವರು ಪೊಲೀಸರಿಗೆ ಲಿಖಿತ ಉತ್ತರ ನೀಡಿದ್ದು ಏಳು ದಿನಗಳ ನಂತರ ಯಾವುದಾದರೂ ದಿನಾಂಕ ಗೊತ್ತು ಪಡಿಸಿದಲ್ಲಿ ಅಂದು ತಮ್ಮ ಕಕ್ಷಿದಾರ ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಹೋಮ ಹವನ:
ಮತ್ತೊಂದಡೆಯಲ್ಲಿ ತಮಗೆ ಎದುರಾಗಿರುವ ಸಂಕಷ್ಟದಿಂದ ಪಾರು ಮಾಡುವಂತೆ ಕೋರಿ ಮಾಜಿ ಸಚಿವ ಎಚ್ ಡಿ ರೇವಣ್ಣ ದೇವರ ಮೊರೆ ಹೋಕ್ಕಿದ್ದಾರೆ
ಹೊಳೆನರಸೀಪುರದ ತಮ್ಮ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಹೋಮ ನಡೆಸಿದರು.
ಇದಾದ ನಂತರ,ಹರದನಹಳ್ಳಿಯ ಶಿವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು.
ನಾನೇನೂ ತಪ್ಪು ಮಾಡಿಲ್ಲ, ಯಾವುದೇ ರೀತಿಯ ತನಿಖೆಯನ್ನಾದರೂ ಎದುರಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ.ಆರೋಪವನ್ನು ಎದುರಿಸುವ ಶಕ್ತಿ ನಮಗಿದೆ. ತಪ್ಪೇ ಮಾಡಿಲ್ಲ ಎಂದ ಮೇಲೆ ಆರೋಪದ ಬಗ್ಗೆ ಏಕೆ ತಲೆಕೆಡಿಸಿಕೊಳ್ಳಬೇಕು? ಸದ್ಯಕ್ಕೆ ಈ ಬಗ್ಗೆ ತಾವು ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದರು.
ಷಡ್ಯಂತ್ರವನ್ನು ಎದುರಿಸುವ ಶಕ್ತಿ ಇದೆ. ಹೀಗಾಗಿ ತನಿಖೆಯನ್ನು ಎದುರಿಸುವ ಸಾಮರ್ಥ್ಯವನ್ನು ದೇವರು ತಮಗೆ ಕೊಟ್ಟಿದ್ದಾನೆ ಎಸ್‌ಐಟಿ ಸೇರಿದಂತೆ ಯಾವುದೇ ರೀತಿ ತನಿಖೆ ಎದುರಿಸಲು ಸಿದ್ಧ. ಎಸ್‌ಐಟಿ ನೋಟಿಸ್ ಪ್ರತಿಯನ್ನು ಮನೆಗೆ ಅಂಟಿಸಿ ಹೋಗಿದೆ. ಅದರಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ತನಿಖೆಗೆ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
Previous Articleಪ್ರಜ್ವಲ್ ರೇವಣ್ಣನನ್ನು ಏಕಾಏಕಿ ಬಂಧಿಸುವುದಿಲ್ಲವಂತೆ.
Next Article ಪ್ರಜ್ವಲ್ ರೇವಣ್ಣನಿಗೆ ಮತ್ತೊಂದು ಗಂಡಾಂತರ.