ಕರ್ನಾಟಕ : ರಾಜ್ಯಾದ್ಯಂತ ತೀವ್ರ ವಿವಾದ ಸೃಷ್ಟಿಸಿದ್ದ ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದರ ಹಿನ್ನೆಲೆಯಲ್ಲಿ ಇಡೀ ಪರೀಕ್ಷೆ ಪ್ರಕ್ರಿಯೆಯನ್ನೇ ರದ್ದುಪಡಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ.
ಅಕ್ರಮದ ಪ್ರಮುಖ ರೂವಾರಿ ಎನ್ನಲಾದ ದಿವ್ಯಾ ಹಾಗರಗಿ ಮತ್ತು ಇತರೆ ಆರೋಪಿಗಳನ್ನು ಸಿಐಡಿ ತನಿಖೆ ತಂಡ ಬಂಧಿಸಿದ ಬೆನ್ನಲ್ಲೆ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ರಾಜ್ಯ ಪೊಲೀಸ್ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, 545 ಮಂದಿ ಪಿಎಸ್‍ಐ ನೇಮಕಾತಿಗೆ ನಡೆದ ಮುಖ್ಯ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಇಡೀ ಪರೀಕ್ಷೆ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಕಳೆದ 2021ರ ಆಗಸ್ಟ್ 3ರಂದು ನಡೆದಿದ್ದ ಮುಖ್ಯ ಪರೀಕ್ಷೆಗೆ ರಾಜ್ಯಾದ್ಯಂತ 54,289 ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಈಗಾಗಲೇ ಕೆಲವರು ನೇಮಕವೂ ಆಗಿದ್ದರು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ತನಿಖೆಯಿಂದ ಕಂಡುಬಂದಿರುವುದರಿಂದ ಇಡೀ ಪರೀಕ್ಷೆ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ ಎಂದು ಹೇಳಿದರು.
ಈ ಹುದ್ದೆಗಳ ನೇಮಕಾತಿಗೆ ಪುನಃ ಹೊಸದಾಗಿ ಮರು ಪರೀಕ್ಷೆಯನ್ನು ನಡೆಸಲಾಗುವುದು. ಶೀಘ್ರದಲ್ಲೇ ದಿನಾಂಕವನ್ನು ಸಹ ಪ್ರಕಟಿಸುತ್ತೇವೆ. ಆಯ್ಕೆಯಗಿರುವ ಅಭ್ಯರ್ಥಿಗಳು ಕೂಡ ಪರೀಕ್ಷೆ ಬರೆಯಬೇಕು. ಆಪಾದಿತರನ್ನು ಬಿಟ್ಟು ಅರ್ಜಿ ಸಲ್ಲಿಸಿದ್ದವರು ಮರು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ವಿವರಿಸಿದರು.