ಬೆಂಗಳೂರು, ಮಾ.6- ನಗರದ ಐಟಿಪಿಎಲ್ ರಸ್ತೆಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿ ಪರಾರಿಯಾಗಿರುವ ಆರೋಪಿಯ ಸುಳಿವು ನೀಡಿದವರಿಗೆ ಹತ್ತು ಲಕ್ಷ ರೂಪಾಯಿ ಬಹುಮಾನವನ್ನು ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಘೋಷಿಸಿದೆ.
ಮಾರ್ಚ್ ಒಂದರಂದು ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಶಂಕಿತ ಆರೋಪಿಯ ಭಾವಚಿತ್ರ ಬಿಡುಗಡೆ ಮಾಡಿರುವ ಎನ್ಐಎ, ಆರೋಪಿಯನ್ನು ಬಂಧಿಸಲು ಅನುಕೂಲವಾಗುವ ಮಾಹಿತಿ ನೀಡಿದವರಿಗೆ ಈ ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿದೆ.
ಅಲ್ಲದೆ, ಆರೋಪಿಯ ಬಗ್ಗೆ ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡುವುದಾಗಿ ಹೇಳಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-29510900, 8904241100, ಇ ಮೇಲ್: info.blr.nia@gov.in ಸಂಪರ್ಕಿಸಬಹುದಾಗಿದೆ ಎಂದು ಎನ್ಐಎ ಬಿಡುಗಡೆ ಮಾಡಿರು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದೆ.
ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸೋಟಿಸಿ ಪರಾರಿಯಾಗಿರುವ ದುಷ್ಕರ್ಮಿಗಾಗಿ ಸಿಸಿಬಿ ಪೊಲೀಸ್ ತಂಡಗಳು ಮ್ಯಾಪಿಂಗ್ ಮಾಡಿ ಮಾಹಿತಿ ಕಲೆ ಹಾಕುತ್ತಿವೆ. ಸೋಟ ಸಂಭವಿಸಿ 5 ದಿನ ಕಳೆದರೂ ಆರೋಪಿಯ ಸುಳಿವು ಸಿಕ್ಕಿಲ್ಲ. ಆತನ ಪತ್ತೆಗಾಗಿ ಸಿಸಿಬಿ ಪೊಲೀಸ್ ತಂಡಗಳು ಹರಸಾಹಸಪಡುತ್ತಿವೆ. ವಿವಿಧ ಆಯಾಮಗಳಲ್ಲಿ ಆರೋಪಿಯ ಸುಳಿವಿಗಾಗಿ ಬೆನ್ನತ್ತಿರುವ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದು, ಆತನ ಪತ್ತೆಗಾಗಿ ಮ್ಯಾಪಿಂಗ್ ಮಾಡಿದ್ದಾರೆ.
ಆರೋಪಿಯು ಕೆಫೆಗೆ ಬಂದು ಹೋದ ಮಾರ್ಗಗಳಲ್ಲಿ ಹಾಗೂಪ ಕೆಫೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮ್ಯಾಪಿಂಗ್ ನಡೆಸಿದ್ದಾರೆ.
ಆರೋಪಿಯು ಸ್ಥಳೀಯನೇ ಅಥವಾ ಹೊರರಾಜ್ಯದವನೇ, ಎಲ್ಲಿಂದ ಆತ ಪ್ರಯಾಣ ಆರಂಭಿಸಿದ, ಎಲ್ಲಿ ಪ್ರಯಾಣ ಕೊನೆಗೊಳಿಸಿ ಎಲ್ಲಿಗೆ ಹೋಗಿದ್ದಾನೆಂಬ ಯಾವುದಾದರೊಂದು ಮಾರ್ಗದಲ್ಲಿ ಸುಳಿವು ಸಿಕ್ಕಿದರೂ ಸಹ ಆರೋಪಿಯ ಪತ್ತೆಗೆ ಸಹಕಾರಿಯಾಗಲಿದೆ.
ಆತ ಎಲ್ಲಿಯೂ ತನ್ನ ಮುಖ ಚಹರೆ ಗುರುತು ಪತ್ತೆಯಾಗದಂತೆ ಟೋಪಿ ಧರಿಸಿ ಕನ್ನಡಕ ಹಾಕಿಕೊಂಡು ಮಾಸ್ಕ್ ಹಾಕಿ ಬಹಳ ಚಾಣಾಕ್ಷತೆ ವಹಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.