ಮೈಸೂರು, ಜೂ.16- ಫೇಸ್‍ಬುಕ್ ನೀಡಿದ ಸುಳಿವನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡ ವಿದ್ಯಾರಣ್ಯಪುರಂ ಪೊಲೀಸರು ನಾಲ್ವರು ಸರಗಳ್ಳರನ್ನು ಬಂಧಿಸಿ 13.5 ಲಕ್ಷ ಮೌಲ್ಯದ 300 ಗ್ರಾಂ ತೂಕದ 7 ಚಿನ್ನದ ಸರಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸರಗಳ್ಳರಾದ ಕೃಷ್ಣ, ಪ್ರಜ್ವಲ್ ಸೇರಿ ನಾಲ್ವರು ಬಂಧಿತ ಆರೋಪಿಗಳಾಗಿದ್ದು ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ತಿಳಿಸಿದ್ದಾರೆ.
ಕಳೆದ ಮೇ 30ರಂದು ವಿಜಯನಗರದಲ್ಲಿ ವಾಯುವಿಹಾರಕ್ಕೆ ತೆರಳಿದ ವೃದ್ಧೆಯ ಚಿನ್ನದ ಸರ ಕಸಿದ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದರು. ಬೈಕ್‍ನಲ್ಲಿ ಪರಾರಿಯಾಗುತ್ತಿದ್ದ ದುಷ್ಕರ್ಮಿಗಳ ಫೋಟೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕೃತ್ಯ ನಡೆಸುವ ಹಿಂದಿನ ದಿನ ಇದೇ ಇಬ್ಬರು ವ್ಯಕ್ತಿಗಳು ರೂಪಾನಗರದಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದರು.
ಸ್ಥಳೀಯ ನಿವಾಸಿಯೊಬ್ಬರು ಇವರ ಚಲನ-ವಲನಗಳನ್ನು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದರು. ವಿಜಯನಗರದ ಕೃತ್ಯದ ನಂತರ ವ್ಯಕ್ತಿ ಫೇಸ್‍ಬುಕ್‍ನಲ್ಲಿ ಅಪ್ ಲೋಡ್ ಮಾಡಿದ್ದರು.
ಈ ಸುಳಿವಿನ ಆಧಾರದ ಮೇರೆಗೆ ಕಾರ್ಯೋನ್ಮುಖರಾದ ಡಿಸಿಪಿ ಗೀತಾ ಪ್ರಸನ್ನ ಅವರು ಕೆಆರ್ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಹಾಗು ವಿದ್ಯಾರಣ್ಯಪುರಂ ಇನ್ಸ್‌ಪೆಕ್ಟರ್ ರಾಜು ಅವರಿಗೆ ಮಾರ್ಗದರ್ಶನ ನೀಡಿದ್ದರು.
ಅದರಂತೆ ಕಳ್ಳರ ಜಾಡು ಹಿಡಿದು ಕೃಷ್ಣ ಹಾಗು ಪ್ರಜ್ವಲ್ ಇಬ್ಬರನ್ನೂ ಸೆರೆ ಹಿಡಿದು ಅವರು ನೀಡಿದ ಮಾಹಿತಿಯನ್ನು ಆಧರಿಸಿ ಇನ್ಸ್ ಪೆಕ್ಟರ್ ರಾಜು ತಮ್ಮ ಸಿಬ್ಬಂದಿಗಳ ಸಹಕಾರದಿಂದ ಇನ್ನಿಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 3 ದ್ವಿಚಕ್ರ ವಾಹನ, 5 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಂಧನದಿಂದ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಏಳು ಸರಗಳ್ಳತನ ಪತ್ತೆಯಾಗಿದ್ದು ಕಾರ್ಯಾಚರಣೆ ನಡೆಸಿದ ತಂಡವನ್ನು ಅಭಿನಂದಿಸಲಾಗಿದೆ.
Previous ArticleOLX ಜಾಹೀರಾತು ನೋಡಿ ಮರುಳಾಗದಿರಿ!! ಇಲ್ಲಿದ್ದಾರೆ ಖತರ್ನಾಕ್ ಕಳ್ಳರು!
Next Article ಬೆಂಗಳೂರಲ್ಲಿ ಪುಲ್ ಟ್ರಾಫಿಕ್ ಜಾಮ್.. !!