ಬೆಂಗಳೂರು, ನ.8- ರಾಜ್ಯದ ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಮಹಾರಾಷ್ಟ್ರದ ಕೆಲ ಬಿಜೆಪಿ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ.ಎಂಬ ಸುದ್ದಿಗಳ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಚ್ಚರಿಯ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Fadnavis) ರಾಜ್ಯದ ಕೆಲವು ಕಾಂಗ್ರೆಸ್ ಶಾಸಕರ ಭೇಟಿಗೆ ಪ್ರಯತ್ನ ನಡೆಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಮಂದಿ ಶಾಸಕರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿಗಳನ್ನು ಶಿವಕುಮಾರ್ ಅವರ ಮಾತು ಪುಷ್ಟೀಕರಿಸಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಮಗೆ ಬಹಳಷ್ಟು ಮಾಹಿತಿಗಳಿವೆ. ಸದ್ಯಕ್ಕೆ ನಾವು ಏನನ್ನು ಬಹಿರಂಗ ಪಡಿಸುವುದಿಲ್ಲ. ಲೋಕಸಭೆ ಚುನಾವಣೆಗೂ ಮುನ್ನಾ ರಾಜ್ಯ ಸರ್ಕಾರದಲ್ಲಿ ಗೊಂದಲ ಮೂಡಿಸಬೇಕು ಎಂದು ಬಿಜೆಪಿಯ ಕೆಲಸವಿಲ್ಲದ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಮ್ಮ ಒಬ್ಬನೆ ಒಬ್ಬ ಶಾಸಕನನ್ನು ಕರೆದುಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡೆಸಿರುವ ಸಭೆಗೆ ರಾಜ್ಯದ ಕಾಂಗ್ರೆಸ್ ಶಾಸಕರು ಹೋಗಿಲ್ಲ.
ಆದರೆ ಬಿಜೆಪಿಯವರು ಲೋಕಸಭೆ ಚುನಾವಣೆಗೂ ಮುನ್ನಾ ಗೊಂದಲ ಮಾಡಲು ಯತ್ನಿಸುತ್ತಿದ್ದಾರೆ. ಅವರ ಪಕ್ಷದಲ್ಲಿಯೇ ಸಾಕಷ್ಟು ಗೊಂದಲ ಇದೆ, ನಾಯಕತ್ವ ಇನ್ನೂ ತೀರ್ಮಾನವಾಗಿಲ್ಲ. ಅದರ ನಡುವೆ ನಮ್ಮ ಶಾಸಕರ ಕುಶಲ ವಿಚಾರಿಸಲು, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುವಂತೆ ಬಂದು, ಹೊರ ಹೋಗುವಾಗ ರಾಜಕೀಯ ಮಾತನಾಡಿದ್ದಾಗಿ ಬಿಂಬಿಸುತ್ತಿದ್ದಾರೆ.
ಬಿಜೆಪಿಯ ಕೆಲವು ನಿರೋದ್ಯೋಗಿಗಳು, ಏಜೆಂಟರು ಓಡಾಡುತ್ತಿದ್ದಾರೆ. ಬಿಜೆಪಿಯವರು ಸಂಪರ್ಕ ಮಾಡಿ ಚರ್ಚೆ ಮಾಡಿದ ಬಳಿಕ ನಮ್ಮ ಶಾಸಕರು ನಮಗೆ ಮಾಹಿತಿ ನೀಡುತ್ತಿದ್ದಾರೆ ಎಂದರು.