ಬೆಂಗಳೂರು, ಅ.12 – ರಾಜಧಾನಿ ಮಹಾನಗರ ಬೆಂಗಳೂರಿನಲ್ಲಿ (Bengaluru) ಸಿನಿಮೀಯ ಶೈಲಿಯಲ್ಲಿ ದರೋಡೆ ನಡೆದಿದ್ದು, ನಗರದ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ಹಾಡಹಗಲೇ ಬ್ಯಾಡರಹಳ್ಳಿಯಲ್ಲಿರುವ ಚಿನ್ನದ ಅಂಗಡಿಗೆ ನುಗ್ಗಿದ ದರೋಡೆಕೋರರು ಅಂಗಡಿ ಮಾಲೀಕನ ಮೇಲೆ ಗುಂಡು ಹಾರಿಸಿ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ದರೋಡೆಕೋರರ ಬಂದೂಕಿನಿಂದ ಸಿಡಿದ ಗುಂಡಿನಿಂದ ಚಿನ್ನದಂಗಡಿ ಮಾಲೀಕ ಮನೋಜ್ ಕಾಲಿಗೆ ಗಾಯವಾಗಿದ್ದು ಆತ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೇಂದ್ರ ವಲಯ ಡಿಸಿಪಿ ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಬ್ಯಾಡರಹಳ್ಳಿಯ ಪೈಪ್ ಲೈನ್ ರಸ್ತೆಯ ವಿನಾಯಕ ಜ್ಯುವೆಲ್ಲರ್ಸ್ ಬಳಿಗೆ ಇಂದು ಬೆಳಗ್ಗೆ 10.45ರ ಸುಮಾರಿಗೆ ಎರಡು ಬೈಕ್‌ಗಳಲ್ಲಿ ನಾಲ್ವರು ಬಂದಿದ್ದಾರೆ.ಅವರು ಏಕಾಏಕಿ ಅಂಗಡಿಗೆ ನುಗ್ಗಿ ಮಾಲೀಕ ಮನೋಜ್ ಗನ್ ತೋರಿಸಿ ಬೆದರಿಸಲು ಮುಂದಾಗಿದ್ದಾರೆ. ಇದಕ್ಕೆ ಬಗ್ಗದೆ ಮನೋಜ್ ಪ್ರತಿರೋಧ ತೋರಿದಾಗ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಶಾಪ್‌ನಲ್ಲಿದ್ದ ಚಿನ್ನಾಭರಣವನ್ನೆಲ್ಲ ದೋಚಿ ಪರಾರಿಯಾಗಿದ್ದಾರೆ.
ಅಂಗಡಿಯಲ್ಲಿದ್ದ ಸುಮಾರು 1 ಕೆಜಿ ತೂಕದ ಚಿನ್ನಾಭರಣ ದರೋಡೆ ಮಾಡಿರುವ ಕುರಿತು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ರಕ್ತದ ಮಡುವಿನಲ್ಲಿದ್ದ ಗಾಯಾಳು ಮನೋಜ್‌ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿರುವ ಸಿಸಿಟಿವಿಗಳ ಪರಿಶೀಲನೆ ನಡೆಸುತ್ತಿದ್ದು, ಸಿಕ್ಕ ಸುಳಿವಿನ ಆಧಾರದ ಮೇಲೆ ದರೋಡೆಕೋರರಿಗೆ ಹುಡುಕಾಟ ನಡೆಸಿದ್ದಾರೆ.