ಬೆಂಗಳೂರು, ಏ.23- ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಧರಣಿ ನಡೆಸಿದ್ದಾರೆ.
ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮುಳಗಿಸಿ ಆಕೋಶ ವ್ಯಕ್ತಪಡಿಸಿದರು ರಾಜಕೀಯ ಕಾರಣಕ್ಕಾಗಿ ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಪಾದಿಸಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬರಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾಮಗಾರಿ ಕೈಗೊಳ್ಳಲು ಆರ್ಥಿಕ ನೆರವು ನೀಡುವಂತೆ ಕೋರಿ ಕೇಂದ್ರಕ್ಕೆ ಮನವಿ ಕೊಟ್ಟು ಏಳು ತಿಂಗಳಾಯಿತು. ಇನ್ನೂ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆಪಾದಿಸಿದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಯಾವ ಮುಖ ಹೊತ್ತುಕೊಂಡು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅವರಿಗೆ ಯಾವುದೇ ನೈತಿಕತೆ ಇಲ್ಲ ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದೆ. ಇದನ್ನು ಖಂಡಿಸಿ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಿದ್ದೇವೆ’ ಎಂದರು.
ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಕಂತಿನಲ್ಲಿ 2 ಸಾವಿರ ರೂಪಾಯಿ ಕೊಟ್ಟಿದ್ದೇವೆ. ಅದರಂತೆ ಒಟ್ಟು 659 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದೇವೆ. ಬರಗಾಲಕ್ಕೆ ನಾವು ಸಮರ್ಪಕವಾಗಿ ಸ್ಪಂದಿಸಿದ್ದೇವೆ ಎಂದು ವಿವರಿಸಿದರು.
ಪ್ರಾಕೃತಿಕ ವಿಕೋಪ ನಿಧಿ ಅಡಿಯಲ್ಲಿ18,172 ಕೋಟಿ ರೂಪಾಯಿ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವೆ. ಆದರೆ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಮೋದಿ, ಅಮಿತ್ ಶಾ ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಬರುತ್ತಿದ್ದಾರೆ. ರಾಜ್ಯಕ್ಕೆ ಬರಲು ಮೋದಿ, ಶಾ ಅವರಿಗೆ ನೈತಿಕತೆ ಇಲ್ಲ. ಭದ್ರಾ ಮೇಲ್ಡಂಡೆ ಯೋಜನೆಗೆ ಅನುದಾನ ಕೊಟ್ಟಿಲ್ಲ. ರಾಷ್ಟ್ರೀಯ ಯೋಜನೆ ಎಂದೂ ಘೋಷಣೆ ಮಾಡಿಲ್ಲ. 15ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ವಿಶೇಷ ಹಣವನ್ನೂ ಕೊಟ್ಟಿಲ್ಲ. ಬರ ಪರಿಹಾರಕ್ಕೆ ಇದುವರೆಗೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ದೂರಿದರು.
ರಾಜ್ಯದ ಹಲವಡೆ ಪ್ರವಾಹ ಬಂದಾಗ ಮೋದಿ, ಅಮಿತ್ ಶಾ ಬರಲಿಲ್ಲ, ಭೀಕರ ಬರಗಾಲ ಬಂದಾಗಲೂ ರಾಜ್ಯಕ್ಕೆ ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಬರುತ್ತಿದ್ದಾರೆ. ಹೀಗಾಗಿಯೇ ನಾವು ಗೋ ಬ್ಯಾಕ್ ಮೋದಿ, ಗೋ ಬ್ಯಾಕ್ ಅಮಿತ್ ಶಾ ಎಂದು ಹೇಳುತ್ತಿದ್ದೇವೆ’ ಎಂದರು.
ಕಳೆದ ವರ್ಷ ಸೆಪ್ಟೆಂಬರ್ 22ರಂದು ಬರ ಪರಿಹಾರ ಹಣ ಬಗ್ಗೆ ಮನವಿ ಕೊಟ್ಟಿದ್ದೇವೆ. ಕೇಂದ್ರ ಬರ ಪರಿಹಾರ ತಂಡ ಬಂದು ಪರಿಶೀಲನೆ ಮಾಡಿ ವರದಿ ಕೊಟ್ಟಿದೆ. ಕರ್ನಾಟಕದಲ್ಲಿ 223 ತಾಲ್ಲೂಕುಗಳಲ್ಲಿ ಭೀಕರವಾದ ಬರಗಾಲ ಇದೆ. ಗ್ಯಾರಂಟಿ ಯೋಜನೆಗೆ ಅನುದಾನ ಕೇಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ನಾವು ಗ್ಯಾರಂಟಿ ಯೋಜನೆಗೆ ದುಡ್ಡು ಕೇಳುತ್ತಿಲ್ಲ’ ಎಂದರು.
ಈಗ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿಕೆ ಸಲ್ಲಿಸಿದೆ ಹೀಗಾಗಿ ಇನ್ನೂ ಒಂದು ವಾರ ಕಾಯುತ್ತೇವೆ. ಒಂದು ವೇಳೆ ವಾರದಲ್ಲಿ ಬಿಡುಗಡೆ ಮಾಡದಿದ್ದರೆ ಮತ್ತೆ ಕೋರ್ಟ್ ಗೆ ಹೋಗುತ್ತೇವೆ’ ಎಂದರು.
ಕರ್ನಾಟಕಕ್ಕೆ ಜಯ:
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ‘ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ. ಇಂದು ಅಮಿತ್ ಶಾ ರಾಜ್ಯಕ್ಕೆ ಬರುತ್ತಿದ್ದಾರೆ. ಮೊದಲು ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿ. ಇಲ್ಲದೇ ಇದ್ದರೆ ಹೇಗೆ ರಾಜ್ಯದಲ್ಲಿ ಮತ ಯಾಚಿಸುತ್ತೀರಿ. ಕರ್ನಾಟಕದ ಬಗ್ಗೆ ಕರುಣೆ ಇದ್ದರೆ ತಕ್ಷಣ ಹಣ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.
ಕೇಂದ್ರ ಕೊಡುವ ಪ್ರತಿ ಪೈಸೆಯನ್ನು ಇಟ್ಕೊಳ್ಳೋದಿಲ್ಲ. ಎಲ್ಲವನ್ನೂ ರೈತರ ಖಾತೆಗೆ ಹಾಕುತ್ತೇವೆ. ನಾವು ತುಂಬಾ ಅವಮಾನ ಅನುಭವಿಸಿದ್ದೆವು. ಮನವಿ ಕೊಟ್ಟಿಲ್ಲ, ಮನವಿಯೇ ಸರಿ ಇಲ್ಲ ಎಂದೂ ಹೇಳಿದ್ದರು. ಆದರೆ, ಈಗ ಸುಪ್ರೀಂ ಕೋರ್ಟ್ ನಲ್ಲಿ ಕೈ ಜೋಡಿಸಿ ಅವರೇ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ’ ಎಂದರು.
ಪ್ರತಿಭಟನೆಯಲ್ಲಿ ಸಚಿವರಾದ ಕೆ.ಜೆ. ಜಾರ್ಜ್, ರಾಮಲಿಂಗಾ ರೆಡ್ಡಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ,ಶಾಸಕ ರಿಜ್ವಾನ್ ಅರ್ಷದ್, ಎಚ್.ಎಂ. ರೇವಣ್ಣ, ನಾಗರಾಜ್ ಯಾದವ್ ಮತ್ತಿತರರು ಇದ್ದರು.