ಬೆಂಗಳೂರು,ಡಿ.28- ಸ್ಪೈಸ್‌ಜೆಟ್ ವಿಮಾನದಲ್ಲಿ (Spicejet) ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರು ವಿಮಾನದಲ್ಲಿ ತಮ್ಮ ವಾಲೆಟ್ ಕಳೆದುಕೊಂಡಿದ್ದರು.
ಈ ಬಗ್ಗೆ ಕಾಲ್ ಸೆಂಟರ್ ಸಿಬ್ಬಂದಿಗೆ ಕರೆ ಮಾಡಿ ದೂರು ನೀಡಲು ಮುಂದಾದರು. ಆದರೆ ಕಾಲ್ ಸೆಂಟರ್ ಸಿಬ್ಬಂದಿ ಇವರ ಕರೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಇದರಿಂದ ಆಕ್ರೋಶಗೊಂಡ ಪ್ರಯಾಣಿಕ, ತನ್ನ ವಾಲೆಟ್ ನಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಹಾಕಿ ಪೊಲೀಸ್ ವಿಚಾರಣೆಗೆ ಹಾಜರಾಗುವಂತಾದ ವಿಚಿತ್ರ ಘಟನೆ ನಡೆದಿದೆ.
ಶ್ರೇಯಾಂಶ್ ಚಮಾರಿಯಾ ಅವರು ಕಳೆದ ಡಿಸೆಂಬರ್ 26 ರಂದು ಬೆಳಗ್ಗೆ 9.20 ಕ್ಕೆ ಎಸ್‌ಜಿ 8536 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ತಮ್ಮ ವಾಲೆಟ್ ಕಾಣೆಯಾಗಿದೆ ಎಂದು ಅರಿತ ಅವರು ಗುರುಗ್ರಾಮ್‌ನಲ್ಲಿರುವ ಸ್ಪೈಸ್‌ಜೆಟ್ ಕಾಲ್ ಸೆಂಟರ್‌ಗೆ ಬೆಳಗ್ಗೆ 10.16ಕ್ಕೆ ಕರೆ ಮಾಡಿದ್ದಾರೆ. “ಕರೆಗೆ ಉತ್ತರಿಸಿದ ವ್ಯಕ್ತಿ ಅವರಿಗೆ ಎಂದಿನಂತೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ ಮತ್ತು ಕಾಲ್ ಅನ್ನು ಹೊಲ್ಡ್ ಮಾಡಿದ್ದಾರೆ.
ಕಾಲ್ ಸೆಂಟರ್ ಸಿಬ್ಬಂದಿಯ ಕಿರಿಕಿರಿಯ ಪ್ರಶ್ನೆ ಹಾಗೂ ಈತ ತನ್ನ ಕರೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ತಾಳ್ಮೆ ಕಳೆದುಕೊಂಡ ಅವರು ಈತನ ವರ್ತನೆಯಿಂದ ನನಗೆ ನನ್ನ ವಾಲೆಟ್ ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿ, ನನ್ನ ವಾಲೆಟ್ ಕಳೆದಿದೆ ಅಷ್ಟೇ ಅಲ್ಲ, ಅದರಲ್ಲಿ ಬಾಂಬ್ ಇದೆ ಮತ್ತು ಅದನ್ನು ತಕ್ಷಣವೇ ಪತ್ತೆ ಮಾಡುವಂತೆ ಹೇಳಿದ್ದಾರೆ.
ಇದರಿಂದ ಆತಂಕಗೊಂಡ ಕಾಲ್ ಸೆಂಟರ್ ಸಿಬ್ಬಂದಿ ಬಾಂಬ್ ಇರುವ ಸ್ಥಳವನ್ನು ಕೇಳಿದ್ದಾರೆ, ಪ್ರಯಾಣಿಕ ಚಮಾರಿಯಾ, ಹಿಂದಿಯಲ್ಲಿ ಉತ್ತರಿಸಿ, “ನಾನು ನಿಮಗೆ ಹೇಳುವುದಿಲ್ಲ. ಅದು ಯಾವಾಗ ಬೇಕಾದಾರೂ ಸ್ಫೋಟವಾಗಬಹುದು” ಎಂದಿದ್ದಾರೆ . ತಕ್ಷಣ ಸ್ಪೈಸ್ ಜೆಟ್ ಅಧಿಕಾರಿಗಳು ವಿಮಾನ ನಿಲ್ದಾಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ನಡುವೆ, ಸ್ಪೈಸ್ ಜೆಟ್ ಸಿಬ್ಬಂದಿ ಬೆಳಗ್ಗೆ 10.59 ಕ್ಕೆ ವಿಮಾನದೊಳಗೆ ವಾಲೆಟ್ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ನಂತರ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಮಾಹಿತಿ ನೀಡಿದ್ದು, ಅವರು ವಿಶೇಷ ಬಾಂಬ್ ಪತ್ತೆ ತಂಡವನ್ನು ಕರೆಯಿಸಿ ಪರಿಶೀಲಿಸಿದಾಗ ಅದೊಂದು, ಹುಸಿ ಬಾಂಬ್ ಕರೆ ಎಂದು ಗೊತ್ತಾಗಿದೆ.
ಇದಾದ ನಂತರ ವಾಲೆಟ್ ಕಳೆದುಕೊಂಡ ಪ್ರಯಾಣಿಕನನ್ನು ಸ್ಪೈಸ್‌ಜೆಟ್ ಕೌಂಟರ್ ಬಳಿ ಬರುವಂತೆ ಸೂಚಿಸಿದ್ದಾರೆ. ಅದರಂತೆ ವಾಲೆಟ್ ಪಡೆಯಲು ಬಂದ ಆತನನ್ನು ಬಂಧಿಸಿ ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ