ಬೆಂಗಳೂರು, ಅ.26- ವನ್ಯಜೀವಿ ಉತ್ಪನ್ನಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದು. ಆಭರಣಗಳಾಗಿ ಬಳಸುವುದು ಅಕ್ಷಮ್ಯ ಅಪರಾಧ ಹಾಗೂ ವನ್ಯಜೀವಿ ಕಾಯಿದೆ ಉಲ್ಲಂಘನೆ ಈ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಕೊರತೆಯಿದೆ. ಹೀಗಾಗಿ, ವನ್ಯಜೀವಿ ಉತ್ಪನ್ನಗಳನ್ನು ಇಟ್ಟುಕೊಂಡಿರುವವರು ಅವುಗಳನ್ನು ಸರ್ಕಾರಕ್ಕೆ ಮರಳಿಸಲು ಕೊನೆಯ ಅವಕಾಶ ನೀಡುವ ಕಾನೂನು ಸಾಧ್ಯತೆಗಳನ್ನು ಪರಾಮರ್ಶಿಸಲಾಗುತ್ತಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.
ಅರಣ್ಯ ಇಲಾಖೆಯ (Forest Department) ಉನ್ನತಾಧಿಕಾರಿಗಳೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪೂರ್ವಜರು ಹೊಂದಿದ್ದ ವನ್ಯಜೀವಿ ಅಂಗಾಂಗದಿಂದ ಮಾಡಿದ ಟ್ರೋಫಿ, ಫಲಕ, ಪೆಂಡೆಂಟ್ ಸೇರಿದಂತೆ ಯಾವುದೇ ಉತ್ಪನ್ನಗಳನ್ನು ಅರಣ್ಯ ಇಲಾಖೆಯಿಂದ ದೃಢೀಕರಿಸಿಕೊಂಡು ಮಾಲೀಕತ್ವದ ಹಕ್ಕು ಪಡೆದುಕೊಳ್ಳಲು 2003ರವರೆಗೆ ಹಲವು ಅವಕಾಶ ನೀಡಲಾಗಿತ್ತು. ಹಲವರು ತಮ್ಮ ಬಳಿ ಇದ್ದ ವನ್ಯಜೀವಿ ಉತ್ಪನ್ನಗಳಿಗೆ ಮಾಲೀಕತ್ವದ ಹಕ್ಕು ಪಡೆದಿದ್ದಾರೆ. ಇನ್ನೂ ಅನೇಕರು ದೃಢೀಕರಣ ಮತ್ತು ಪ್ರಮಾಣ ಪತ್ರ ಪಡೆದಿಲ್ಲ ಎಂದು ಹೇಳಿದರು.
ಹುಲಿ ಉಗುರಿನ ಲಾಕೆಟ್ ಇರುವ ಸರ ಧರಿಸಿರುವವರ ವಿರುದ್ಧ ನಿತ್ಯ ದೂರುಗಳು ಬರುತ್ತಿದ್ದು, ಬಹುತೇಕರಿಗೆ ಇದು ಅಪರಾಧ ಎಂಬ ಅರಿವೇ ಇಲ್ಲ ಎಂಬುದು ಗೋಚರವಾಗುತ್ತಿದೆ. ಗ್ರಾಮೀಣ ಪ್ರದೇಶದ ಕೆಲವರ ಮನೆಗಳಲ್ಲಿ ಜಿಂಕೆ ಚರ್ಮ, ಆನೆ ದಂತದಿಂದ ಮಾಡಿದ ಕಲಾಕೃತಿಗಳು, ಜಿಂಕೆ ಮತ್ತು ಸಾರಂಗದ ಕೊಂಬು ಇತ್ಯಾದಿಗಳನ್ನು ಇಟ್ಟುಕೊಂಡಿರುತ್ತಾರೆ. ಇದು ಅಪರಾಧ ಎಂಬುದೂ ಅವರಿಗೆ ತಿಳಿದಿಲ್ಲ ಎಂದು ವಿವರಿಸಿದರು.
ಬಿಗ್ ಬಾಸ್ ಸ್ಪರ್ಧಿವರ್ತೂರು ಸಂತೋಷ ಪ್ರಕರಣ ವರದಿಯಾದ ಬಳಿಕ, ವನ್ಯಜೀವಿ ಉತ್ಪನ್ನಗಳ ಅಕ್ರಮ ದಾಸ್ತಾನಿನ ಬಗ್ಗೆ ಹೆಚ್ಚಾಗಿ ದೂರುಗಳು ಬರುತ್ತಿವೆ. ಕಾನೂನಿನ ಅರಿವಿಲ್ಲದ ಶ್ರೀಸಾಮಾನ್ಯರಿಗೆ ಆಗುವ ತೊಂದರೆ ತಪ್ಪಿಸಲು ಒಂದು ಬಾರಿ ಕೊನೆಯದಾಗಿ ಇಂತಹ ಅಕ್ರಮ ಸಂಗ್ರಹಣೆ, ದಾಸ್ತಾನಿನ ಬಗ್ಗೆ ಘೋಷಣೆ ಮಾಡಿಕೊಳ್ಳಲು ಮತ್ತು ಸರ್ಕಾರಕ್ಕೆ ಮರಳಿಸಲು ಅವಕಾಶ ನೀಡುವ ಬಗ್ಗೆ ಪರಾಮರ್ಶಿಸಿ, ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಅಳಿವಿನಂಚಿನಲ್ಲಿರುವ, ಅಮೂಲ್ಯ ಮತ್ತು ಅಪರೂಪದ ವನ್ಯ ಜೀವಿಗಳಾದ ಹುಲಿ, ಚಿರತೆ, ಚಿಂಕಾರ, ಕೃಷ್ಣಮೃಗ, ಸಾಂಬಾರ್, ಕರಡಿ ಸೇರಿದಂತೆ ಹಲವು ಕಾಡು ಪ್ರಾಣಿಗಳನ್ನು ಪರಿಶಿಷ್ಟ 1ರಲ್ಲಿ ಪಟ್ಟಿ ಮಾಡಲಾಗಿದ್ದು, ಇಂತಹ ಪ್ರಾಣಿಗಳನ್ನು ಕೊಲ್ಲುವುದು, ಬೇಟೆ ಆಡುವುದು, ಅಂತಹ ಪ್ರಾಣಿಗಳ ದೇಹದ ಯಾವುದೇ ಭಾಗದಿಂದ ತಯಾರಿಸಿದ ವಸ್ತುವನ್ನು ಅಲಂಕಾರಿಕವಾಗಿ ಮನೆಯಲ್ಲಿಡುವುದು, ಧರಿಸುವುದು ಕೂಡ ಅಪರಾಧವಾಗಿರುತ್ತದೆ ಎಂದು ತಿಳಿಸಿದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ಎಲ್ಲರಿಗೂ ಕಾನೂನು ಸಮಾನವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗಣ್ಯರೂ ಸೇರಿದಂತೆ ಹಲವರಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳು ಕಾನೂನು ರೀತ್ಯ ಮತ್ತು ಆಯಾ ಸಂದರ್ಭಕ್ಕೆ ಅನುಗುಣವಾಗಿ ತಮ್ಮ ವಿವೇಚನಾಧಿಕಾರ ಬಳಸಿ ಕ್ರಮ ಜರುಗಿಸಲಿದ್ದಾರೆ ಎಂದರು.

ಇತ್ತೀಚೆಗೆ ಬೆಳಗಾವಿ ವಿಭಾಗದಲ್ಲಿ ಖಾನಾಪುರ ಬಳಿಯ ಜಳಗಾ ಅರಣ್ಯದ ವ್ಯಾಪ್ತಿಯಲ್ಲಿ ಮಧ್ಯಪ್ರದೇಶದ ಚಿಕ್ಕಾಅಲಿಯಾಸ್ ಕೃಷ್ಣಾ ಪಾಟ್ಲೆ ಪವಾರ್ ಎಂಬುವನನ್ನು ಬಂಧಿಸಲಾಗಿದ್ದು, ಆತ ಹುಲಿ ಕಳ್ಳಬೇಟೆಗಾರನಾಗಿದ್ದು, ಆತನ ವಿರುದ್ಧ ಹಲವು ರಾಜ್ಯಗಳಲ್ಲಿ ದೂರು ದಾಖಲಾಗಿದೆ. ಅರಣ್ಯ ಇಲಾಖೆ ಕಳ್ಳಬೇಟೆ ನಿಗ್ರಹಕ್ಕೂ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.