ಬೆಂಗಳೂರು, ಮಾ.15- ಲೋಕಸಭಾ ಚುನಾವಣೆ ಅಖಾಡ ಸಜ್ಜುಗೊಂಡಿರುವ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Yediyurappa) ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಿಲುಕಿದ್ದು,ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಅಲೋಕ್ ಮೋಹನ್ ಅವರು ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.ಅಲ್ಲದೆ ಈ ಬಗ್ಗೆ ಮಹಿಳಾ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್ಐಟಿ)ವನ್ನು ರಚಿಸುವಂತೆ ಸೂಚನೆ ನೀಡಿದ್ದಾರೆ.
ಯಡಿಯೂರಪ್ಪ ಅವರು ಕಳೆದ ಫೆಬ್ರವರಿ ತಿಂಗಳಲ್ಲಿ ನನ್ನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯ ತಾಯಿ
ಕಳೆದ ರಾತ್ರಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅವರ ದೂರಿನ ಹಿನ್ನೆಲೆಯಲ್ಲಿ ಸದಾಶಿವನಗರ ಪೊಲೀಸರು ಯಡಿಯೂರಪ್ಪ ವಿರುದ್ಧ ಫೋಕ್ಸೋ ಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(ಎ) ಅಡಿ ಪ್ರಕರಣ ದಾಖಲಿಸಿದ್ದಾರೆ
ಕಳೆದ ರಾತ್ರಿ ಪೊಲೀಸ್ ಠಾಣೆಗೆ ಬಂದ ಮಹಿಳೆ ಟೈಪ್ ಮಾಡಿದ ದೂರಿನ ಪ್ರತಿಯನ್ನು ನೀಡಿದ್ದಾರೆ. ಅದರಲ್ಲಿ, ತಮ್ಮ ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಅತ್ಯಾಚಾರ ನಡೆದಿದೆ.ಆ ಪಾಪಿಗಳಿಗೆ ಶಿಕ್ಷೆಯಾಗಿಲ್ಲ. ಈ ವಿಚಾರದಲ್ಲಿ ನಮಗೆ ಅನ್ಯಾಯವಾಗಿದ್ದು,
ನ್ಯಾಯ ಒದಗಿಸುವಂತೆ ಯಡಿಯೂರಪ್ಪ ಅವರನ್ನು ಕೋರಲಾಯಿತು.
ಇದಕ್ಕಾಗಿ ನನ್ನ ಅಪ್ರಾಪ್ತ ಮಗಳೊಂದಿಗೆ ಕಳೆದ ಫೆಬ್ರವರಿ 2ರಂದು ಯಡಿಯೂರಪ್ಪನವರ ಮನೆಗೆ ಹೋಗಿದ್ದೆ. ಆ ವೇಳೆ ಸುಮಾರು 9 ನಿಮಿಷಗಳ ಕಾಲ ನಮ್ಮೊಂದಿಗೆ ಯಡಿಯೂರಪ್ಪ ಮಾತನಾಡಿದ್ದರು. ಇಬ್ಬರಿಗೂ ಟೀ ಕುಡಿಸಿದ್ದರು.ನಾನು ಯಡಿಯೂರಪ್ಪನವರನ್ನು ಅಪ್ಪಾಜಿ ಎಂದು ಸಂಭೋದಿಸಿದರೆ ನನ್ನ ಮಗಳು ಅವರನ್ನು ತಾತಾ ಎಂದು ಕರೆಯುತ್ತಿದ್ದಳು.
ನಮ್ಮ ಅಹವಾಲು ಕೇಳುವ ವೇಳೆ ಯಡಿಯೂರಪ್ಪ ಅವರು ಬಾಲಕಿಯ ಕೈ ಹಿಡಿದುಕೊಂಡೇ ಇದ್ದರು. ಇದಾದ ನಂತರ ಬಾಲಕಿಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿದ್ದ ಯಡಿಯೂರಪ್ಪ, ಸುಮಾರು 5 ನಿಮಿಷಗಳ ಕಾಲ ಬಾಗಿಲು ಹಾಕಿಕೊಂಡಿದ್ದರು.ಈ ವೇಳೆ ಬಾಲಕಿಯ ಖಾಸಗಿ ಅಂಗಗಳನ್ನು ಮುಟ್ಟಿ ದೌರ್ಜನ್ಯವೆಸಗಿದ್ದಾರೆ. ಇದರಿಂದ ಆಘಾತಗೊಂಡ ಬಾಲಕಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದರೂ ಯಡಿಯೂರಪ್ಪ ಹೊರಗೆ ಬಿಡಲಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಕೆಲ ಸಮಯದ ಬಳಿಕ ಬಾಲಕಿಯು ರೂಮಿನಿಂದ ಓಡಿಬಂದು ಅಳುತ್ತಾ ಎಲ್ಲಾ ಘಟನೆಯನ್ನು ನನಗೆ ತಿಳಿಸಿದಳು. ನಾನು ಯಡಿಯೂರಪ್ಪ ಅವರನ್ನು ಹೀಗೇಕೆ ಮಾಡಿದಿರಿ?’ ಎಂದು ಪ್ರಶ್ನಿಸಿದೆ.ಅದಕ್ಕೆ ಅವರು “ರೇಪ್ ಆಗಿದೆಯೋ ಇಲ್ಲವೋ ಎಂದು ಚೆಕ್ ಮಾಡಲು ಹಾಗೆ ಮಾಡಿದೆ” ಎಂದರು.
ಇದರಿಂದ ಆಘಾತಗೊಂಡ ನಾನು ಅಳಲಾರಂಭಿಸಿದೆ ತಕ್ಷಣವೇ ಯಡಿಯೂರಪ್ಪ ಕ್ಷಮೆ ಯಾಚಿಸುತ್ತಾ,ಈ ವಿಚಾರವನ್ನು ಹೊರಗಡೆ ಎಲ್ಲಿಯೂ ಹೇಳಬಾರದು” ಎಂದು ತಡೆಯಲು ಸಾಕಷ್ಟು ಪ್ರಯತ್ನಿಸಿದರು ಆಗಿರುವ ಅನ್ಯಾಯಕ್ಕೆ ನ್ಯಾಯ ಕೇಳಲು ಹೋದಾಗ ಲೈಂಗಿಕ ಕಿರುಕುಳ ನೀಡಿರುವ ಯಡಿಯೂರಪ್ಪನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತ್ರಸ್ತ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಆಧರಿಸಿ ಸದಾಶಿವ ನಗರ ಠಾಣೆ ಪೊಲೀಸರು, ಪೋಕ್ಸೋ ಕಾಯ್ದೆಯಡಿ ಎಫ್ ಐ ಆರ್ ದಾಖಲಿಸಿದ್ದಾರೆ.
ಈ ಕಾಯಿದೆಯ ಸೆಕ್ಷನ್ 8ರ ಪ್ರಕಾರ ಆರೋಪ ಸಾಬೀತಾದದಲ್ಲಿ ಕನಿಷ್ಠ ಮೂರು ವರ್ಷ, ಕೆಲವೊಮ್ಮೆ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಆಗಬಹುದು. ಜೊತೆಗೆ ದಂಡವನ್ನೂ ವಿಧಿಸಬಹುದು.
ಐಪಿಸಿ ಸೆಕ್ಷನ್ 354 (ಎ) ಲೈಂಗಿಕ ಕಿರುಕುಳಕ್ಕೆ ಶಿಕ್ಷೆಯನ್ನು ವಿಧಿಸುತ್ತದೆ. ಇಷ್ಟವಿಲ್ಲದಿದ್ದರೂ ಲೈಂಗಿಕ ಅಭಿವ್ಯಕ್ತಿಯನ್ನು ಮಾಡುವುದು, ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ ಅಥವಾ ವಿನಂತಿಯನ್ನು ಮಾಡುವುದು, ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಅಶ್ಲೀಲವಾದದ್ದನ್ನು ತೋರಿಸುವುದು ಶಿಕ್ಷಾರ್ಹ ಅಪರಾಧವೆಂದು ಈ ಸೆಕ್ಷನ್ ಹೇಳುತ್ತದೆ.
ತನಿಖೆ ನಂತರ ಕ್ರಮ:
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಪರಮೇಶ್ವರ್, ನಿನ್ನೆ ರಾತ್ರಿ ಒಬ್ಬ ಮಹಿಳೆ ದೂರು ಕೊಟ್ಟಿದ್ದು,ಅದನ್ನು ಪರಿಶೀಲಿಸಿ ಎಫ್ ಐಆರ್ ದಾಖಲಿಸಲಾಗಿದೆ ಪೊಲೀಸರು ಅದರ ಬಗ್ಗೆ ತನಿಖೆ ಮಾಡುತ್ತಿದ್ದು ತನಿಖೆ ಆಗುವವರೆಗೂ ಯಾವುದೇ ವಿಷಯ ತಿಳಿಸಲು ಆಗುವುದಿಲ್ಲ ಎಂದರು.
ಇದು ಒಬ್ಬ ಮಾಜಿ ಮುಖ್ಯಮಂತ್ರಿಗಳ ವಿಷಯಕ್ಕೆ ಸಂಬಂಧಿಸಿದ್ದಾಗಿದ್ದು, ಬಹಳ ಸೂಕ್ಷ್ಮ ವಿಷಯ,
ಯಡಿಯೂರಪ್ಪ ಒಬ್ಬ ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕರಣದಲ್ಲಿ ಮುಖ್ಯಮಂತ್ರಿಯವರಿಗಾಗಲಿ, ಉಪ ಮುಖ್ಯಮಂತ್ರಿಯವರಿಗಾಗಲಿ, ನನಗಾಗಲೀ ಯಾವುದೇ ರಾಜಕೀಯ ಉದ್ದೇಶಗಳಿಲ್ಲ. ಪೊಲೀಸರು ಕಾನೂನಿನ ಪ್ರಕಾರ ತನಿಖೆ ನಡೆಸಿ, ಕ್ರಮ ಜರುಗಿಸುತ್ತಾರೆ.ದೂರು ಕೊಟ್ಟಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಕೆಲವರು ಹೇಳಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಆ ಮಹಿಳೆ ಕೈಬರಹದ ದೂರು ಕೊಟ್ಟಿಲ್ಲ, ಟೈಪ್ ಮಾಡಿದ ದೂರಿನ ಪ್ರತಿಯನ್ನು ಸಲ್ಲಿಸಿದ್ದರು ಎಂಬ ಮಾಹಿತಿ ನೀಡಿದ್ದಾರೆ’ ಎಂದು ವಿವರಿಸಿದರು.
ಅಗತ್ಯ ಕಂಡುಬಂದರೆ ದೂರುದಾರ ಮಹಿಳೆಗೆ ಪೊಲೀಸ್ ರಕ್ಷಣೆ ಒದಗಿಸಲಾಗುತ್ತದೆ. ಯಡಿಯೂರಪ್ಪ ಅವರನ್ನು ವಶಕ್ಕೆ ಪಡೆಯಬೇಕೆ? ಬೇಡವೆ? ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ಈ ಕುರಿತು ತಾವು ಏನನ್ನೂ ಹೇಳಲಾಗದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜಕೀಯವಿಲ್ಲ;
ಇನ್ನು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,ನನ್ನ ವಿರುದ್ಧ ಹೆಣ್ಣುಮಗಳೊಬ್ಬಳು ದೂರು ನೀಡಿದ್ದು,ಎಫ್‌ಐಆರ್ ಕೂಡ ದಾಖಲಾಗಿದೆ. ಕಾನೂನು ಪ್ರಕಾರ ಅದನ್ನು ಎದುರಿಸುತ್ತೇನೆ. ಇದರಲ್ಲಿ ರಾಜಕೀಯ ಪಿತೂರಿ ಇದೆ ಎಂದು ಭಾವಿಸುವುದಿಲ್ಲ ಎಂದು ಹೇಳಿದರು.
ಸುಮಾರು ಒಂದೂವರೆ ತಿಂಗಳ ಹಿಂದೆ ನನ್ನ ಮನೆಯ ಬಳಿ ತಾಯಿ–ಮಗಳು ಬಹಳ ಸಲ ಬಂದು ಹೋಗಿದ್ದರು. ಒಂದು ದಿನ ಕಣ್ಣೀರು ಹಾಕುತ್ತಾ ನಿಂತಿದ್ದರು. ಅವರನ್ನು ಕರೆಸಿ ಏನಮ್ಮ ಸಮಸ್ಯೆ ಎಂದು ಕೇಳಿದ್ದೆ. ತಮಗೆ ಅನ್ಯಾಯ ಆಗಿದೆ ಎಂದು ಹೇಳಿಕೊಂಡರು. ತಕ್ಷಣವೇ ಪೊಲೀಸ್ ಕಮಿಷನರ್ ದಯಾನಂದ ಅವರಿಗೆ ಕರೆ ಮಾಡಿ ಈ ವಿಚಾರ ತಿಳಿಸಿ ಅವರ ಬಳಿ ಕಳಿಸಿದೆ. ಆದರೆ ಅವರು ನನ್ನ ಬಗ್ಗೆಯೇ ಏನೇನೋ ಹೇಳಲು ಶುರು ಮಾಡಿದರು ಎಂದು ವಿವರಿಸಿದರು.
ಈಗ ಬೇರೆ ರೀತಿಯಲ್ಲಿ ನನ್ನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಕಷ್ಟ ಎಂದು ಹೇಳಿಕೊಂಡಾಗ ಹಣವನ್ನೂ ಕೊಟ್ಟು ಕಳಿಸಿದ್ದೆ. ಉಪಕಾರ ಮಾಡಲು ಹೋಗಿ ಏನೋ ಆಯಿತು.. ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಕಾನೂನು ಪ್ರಕಾರವೇ ಎಲ್ಲವನ್ನು ಎದುರಿಸುತ್ತೇನೆ ಎಂದು ಹೇಳಿದರು.