ಬೆಂಗಳೂರು, ಮಾ.14 – ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಈ ಬಾರಿ ಅತ್ಯಧಿಕ ಸ್ಥಾನ ಗೆಲ್ಲಬೇಕು ಎಂದು ರಣತಂತ್ರ ರೂಪಿಸಿರುವ ಬಿಜೆಪಿ ನಾಯಕರು ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಜೆಡಿಎಸ್ ನಾಯಕ ಕುಮಾರಸ್ವಾಮಿ (Kumaraswamy) ಅವರಿಂದ ತಮ್ಮ ಪಕ್ಷಕ್ಕೆ ಹೆಚ್ಚಿನ ಮತ ಲಭಿಸಬಹುದು ಎಂಬುದು ಈ ನಾಯಕರ ಲೆಕ್ಕಾಚಾರ ಆದರೆ ಚುನಾವಣೆ ಪ್ರಚಾರದಲ್ಲಿ ಕುಮಾರಸ್ವಾಮಿ ತೊಡಗುವುದು ಇದೀಗ ಅನುಮಾನ.
ಅಭ್ಯರ್ಥಿಗಳ ಆಯ್ಕೆ ಮತ್ತು ಸ್ಥಾನ ಹೊಂದಾಣಿಕೆ ಕುರಿತು ಚರ್ಚೆ ನಡೆಸಲು ನಾಳೆ ದೆಹಲಿಗೆ ತೆರಳುತ್ತಿರುವ ಕುಮಾರಸ್ವಾಮಿ ಆನಂತರ ಅಮೆರಿಕಕ್ಕೆ ತೆರಳುತ್ತಿದ್ದು ಮೂರು ತಿಂಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅನುಮಾನ
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕುಮಾರಸ್ವಾಮಿಯವರಿಗೆ ಈಗಾಗಲೇ ಮೂರು ಬಾರಿ ಶಸ್ತ್ರ ಚಿಕಿತ್ಸೆ ಆಗಿದೆ. ಆದರೂ ಅವರು ಇನ್ನಷ್ಟು ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯಲ್ಲಿ ಇವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಪರಿಣಿತ ವೈದ್ಯರ ತಂಡ ಮತ್ತೊಂದು ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವನ್ನು ಹೇಳಿದೆ. ಅವರ ಭಾವ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ. ಮಂಜುನಾಥ್ ಅವರು ಈ ಶಸ್ತ್ರ ಚಿಕಿತ್ಸೆಯನ್ನು ಭಾರತದಲ್ಲಿ ಮಾಡುವುದು ಕ್ಲಿಷ್ಟಕರ. ಹೀಗಾಗಿ ಅವರನ್ನು ಅಮೆರಿಕಾದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಬೇಕು ಎಂಬ ಅಭಿಪ್ರಾಯ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅಮೆರಿಕಾ ಪ್ರಯಾಣಕ್ಕೆ ಸಜ್ಜುಗೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಬೆಂಗಳೂರಿಗೆ ಆಗಮಿಸಲಿರುವ ಕುಮಾರಸ್ವಾಮಿಯವರು ಅಮೆರಿಕದ ವೈದ್ಯರ ತಂಡದೊಂದಿಗೆ ಮಾತುಕತೆ ನಡೆಸಿ ಅಲ್ಲಿಗೆ ತೆರಳುವ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಒಂದು ವೇಳೆ ತಕ್ಷಣವೇ ಅವರು ಅಮೆರಿಕಕ್ಕೆ ತೆರಳಿದಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ಶಾಸ್ತ್ರ ಚಿಕಿತ್ಸೆ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡು ಬರಲು ಸಾಧ್ಯವಿಲ್ಲ ಎನ್ನುತ್ತವೆ ಅವರ ಆಪ್ತ ಮೂಲಗಳು. ಹೀಗಾಗಿ ಕುತೂಹಲ ಕೆರಳಿಸಿರುವ ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಎನ್ ಡಿ ಎ ಅಭ್ಯರ್ಥಿ ಗಳ ಪರ ಪ್ರಚಾರದಲ್ಲಿ ತೊಡಗುವುದು ಅನುಮಾನ ಎನ್ನಲಾಗುತ್ತಿದೆ