ಬೆಂಗಳೂರು, ಮೇ 30- ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಮತದಾರರಿಗೆ ನೀಡಿದ ಭರವಸೆಯಂತೆ ರಾಜ್ಯದ
ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲೇಬೇಕು ಎಂದು ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಇಂಧನ ಸಚಿವ ಕೆಜೆ ಜಾರ್ಜ್ ಸೂಚಿಸಿದ್ದಾರೆ.
ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ಕರೆದಿದ್ದು ಸ್ಪಷ್ಟ ಮಾಹಿತಿಯೊಂದಿಗೆ ಸಭೆಗೆ ಹಾಜರಾಗುವಂತೆ ಸಂಬಂಧ ಪಟ್ಟ ಸಚಿವರಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂಧನ ಸಚಿವ ಕೆ.ಜೆ.ಜಾರ್ಜ್ ತಮ್ಮ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ಕೆಪಿಟಿಸಿಎಲ್ ಚೆಸ್ಕಾಂ ಬೆಸ್ಕಾಂ ಸೇರಿದಂತೆ ಎಲ್ಲ ನಿಗಮಗಳ ಪ್ರಮುಖ ಅಧಿಕಾರಿಗಳಿಂದ ತಮ್ಮ ನಿಗಮಗಳ ಖರ್ಚು ವೆಚ್ಚಗಳ ಕುರಿತಂತೆ ಮಾಹಿತಿ ಪಡೆದುಕೊಂಡರು
200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಯೋಜನೆ ಅನುಷ್ಠಾನದಿಂದಾಗುವ ಸಾಧಕ-ಬಾಧಕಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪ್ರಸ್ತುತ ರಾಜ್ಯದಲ್ಲಿ ಉತ್ಪಾದನೆ ಆಗುತ್ತಿರುವ ವಿದ್ಯುತ್ತಿನ ಪ್ರಮಾಣ, ವಿದ್ಯುತ್ ಉತ್ಪಾದನೆ ಹೇಗಿದೆ, ಮುಂದಿನ ದಿನಗಳಲ್ಲಿ ವಿದ್ಯುತ್‍ನ ಬೇಡಿಕೆ ಎಷ್ಟರಿಲಿದೆ ಎಂಬ ಅಂದಾಜು, ಇಂಧನ ಇಲಾಖೆಯ ಪ್ರಸ್ತುತ ಸ್ಥಿತಿಗತಿ, ಉಚಿತ ವಿದ್ಯುತ್ ನೀಡುವುದರಿಂದ ಹೊರೆ ಎಷ್ಟಾಗಲಿದೆ, ಯಾರಿಗೆ ಉಚಿತ ವಿದ್ಯುತ್ ನೀಡಬಹುದು ಎಂಬ ಬಗ್ಗೆ ಸಮಗ್ರವಾಗಿ ಅಧಿಕಾರಿಗಳೊಂದಿಗೆ ಸಚಿವರು ಚರ್ಚೆ ನಡೆಸಿದರು .
ರಾಜ್ಯದ ಎಲ್ಲಾ ಗೃಹಬಳಕೆಯ ವಿದ್ಯುತ್ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡುವ ಯೋಜನೆಯಿಂದ ಸರ್ಕಾರಕ್ಕೆ ಒಂದು ಅಂದಾಜಿನ ಪ್ರಕಾರ ಸುಮಾರು ವಾರ್ಷಿಕ 12,000 ಕೋಟಿ ರೂಪಾಯಿ ಹೊರೆ ಬೀಳಲಿದೆ ಇದನ್ನು ಬರಿಸುವ ದೃಷ್ಟಿಯಿಂದ ನಿಗಮಗಳು ವಿದ್ಯುತ್ ಪೂರೈಕೆ ಮತ್ತು ವಿತರಣೆಯಲ್ಲಿನ ನಷ್ಟ ತಡೆಗಟ್ಟಬೇಕು ಸೋರಿಕೆಯ ನಿಯಂತ್ರಿಸಿ ಕಳ್ಳತನಕ್ಕೆ ಕಡಿವಾಣ ಹಾಕಿದಲ್ಲಿ ಇಷ್ಟು ಮೊತ್ತವನ್ನು ಸಂಗ್ರಹಿಸಬಹುದಾಗಿದೆ ಎಂದು ಕೆಲವು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಅದರ ಆಧಾರದಲ್ಲಿ ಯೋಜನೆಯನ್ನು ರೂಪಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು ಎನ್ನಲಾಗಿದೆ
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ಕುರಿತಂತೆ ಯಾವುದೇ ಅನುಮಾನ ಬೇಡ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿರುವುದಾಗಿ ಗೊತ್ತಾಗಿದೆ.