ಹಾಸನ, ಸೆ.5 – ಸೇಬು ಹಾಗೂ ಮೂಸಂಬಿ ಹಣ್ಣಿನೊಳಗೆ ಗಾಂಜಾ (Ganja) ಇಟ್ಟು ಕೈದಿಗಳಿಗೆ ಪೂರೈಸಲು ಯತ್ನಿಸಿದ ಮೂವರು ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ತರಕಾರಿ ವ್ಯಾಪಾರಿ ತಬ್ರೇಜ್ (28), ಗುಜರಿ ವ್ಯಾಪಾರಿ ವಾಸಿಂ (21) ಹಾಗೂ ರಕೀಬ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಜಿಲ್ಲಾ ಕಾರಾಗೃಹದಲ್ಲಿರುವ ಕೈದಿಗಳಿಗೆ ಗಾಂಜಾ ಸಾಗಿಸಲು ಸಂಚು ಮಾಡಿ ಸೇಬು ಹಾಗೂ ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾ ಸೊಪ್ಪನ್ನು ಇಟ್ಟು ಸ್ಟಿಕ್ಕರ್ ಅಂಟಿಸಿದ್ದರು. ಬಳಿಕ ಹಣ್ಣುಗಳನ್ನು ಜೈಲಿನ ಹಿಂಬದಿಯಿಂದ ಕಾಂಪೌಂಡ್ ಒಳಗೆ ಎಸೆಯಲು ಹೊಂಚು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹೊಂಚು ಹಾಕಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಹಾಸನ ನಗರ ಠಾಣೆ ಸಿಪಿಐ ರೇವಣ್ಣ ಹಾಗೂ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಬಳಿಕ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೂಸಂಬಿ ಹಣ್ಣು ಪತ್ತೆಯಾಗಿದೆ. ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ದಿನಗಳ ಹಿಂದೆ ಜೈಲಿನ ಮೇಲೆ ದಾಳಿ ನಡೆಸಿದ್ದ ಪೊಲೀಸರು ಮೊಬೈಲ್ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದರು. ದಾಳಿ ಬೆನ್ನಲ್ಲೇ ಜೈಲಿನ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು