ಬೆಂಗಳೂರು, ಸೆ.5 – ವಿಮಾನ ಪ್ರಯಾಣಿಕರ ಅವಾಂತರಗಳು ಇತ್ತೀಚಿನ ದಿನಗಳಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿವೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಅವಾಂತರಗಳೂ ಹೆಚ್ಚಾಗುತ್ತಿವೆ.
ಇದರ ಸಾಲಿಗೆ ಇದೀಗ ಹೊಸದೊಂದು ಪ್ರಕರಣ ಸೇರ್ಪಡೆ ಯಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿಗೆ ಬಂದಿದ್ದ ಇಂಡಿಗೋ (Indigo) ವಿಮಾನದ ಶೌಚಾಲಯದಲ್ಲಿ ಬೀಡಿ ಸೇದಿದ ಪ್ರಯಾಣಿಕನನ್ನು ಬಂಧಿಸಲಾಗಿದೆ.
ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬಂಧಿಸಿ ಏರ್‌ಕ್ರಾಫ್ಟ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 336 ಅಡಿಯಲ್ಲಿ ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಮತ್ತು ಸೆಕ್ಷನ್ 25 (3ಬಿ) ಅಡಿಯಲ್ಲಿ ವಿಮಾನದೊಳಗೆ ಧೂಮಪಾನ ಮಾಡದಿರುವ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಏರ್‌ಕ್ರಾಫ್ಟ್ ನಿಯಮಗಳು 1937 ರ ಅಡಿಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಜಿ ಕರುಣಾಕರನ್ ಎಂಬುವವರು ಸೆಪ್ಟೆಂಬರ್ 3 ರ ರಾತ್ರಿ 9.11 ಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ 6ಇ 487 ವಿಮಾನದಲ್ಲಿ 24ಎ ಆಸನದಲ್ಲಿ ಕುಳಿತಿದ್ದರು. ಕೋಲ್ಕತ್ತಾದಿಂದ ವಿಮಾನ ಟೇಕಾಫ್ ಆದ ಸ್ವಲ್ಪ ಸಮಯದ ನಂತರ ವಿಮಾನದ ಹಿಂಭಾಗದಲ್ಲಿ ಸುಡುವ ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ.
ವಾಸನೆ ಶೌಚಾಲಯದಿಂದ ಹೊರಗಿನಿಂದ ಬರುತ್ತಿರುವುದಾಗಿ ತಿಳಿದುಬಂದಿದೆ. ಈ ವೇಳೆ ಬಾಗಿಲು ತಡ್ಡಿದ್ದಾರೆ. ಒಳಗಿದ್ದ ವ್ಯಕ್ತಿ ಬಾಗಿಲು ತೆಗೆದಿದ್ದು, ಕೈಯಲ್ಲಿ ಬೆಂಕಿಪೊಟ್ಟಣ ಇರುವುದು ಕಂಡು ಬಂದಿದೆ. ಅಲ್ಲದೆ, ಶೌಚಾಲಯದೊಳಗೆ ಬೀಡಿಯನ್ನು ಫ್ಲಶ್ ಮಾಡುವ ಪ್ರಯತ್ನ ಮಾಡುತ್ತಿರುವುದೂ ಕೂಡ ಕಂಡು ಬಂದಿದೆ. ಕೂಡಲೇ ಫ್ಲೈಟ್ ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದಾರೆ.
ಬಳಿಕ ವಿಮಾನವು ಕೆಐಎ ತಲುಪಿದ ಕೂಡಲೇ ವ್ಯಕ್ತಿಯನ್ನು ವಿಮಾನ ನಿಲ್ದಾಣದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
ಇಂಡಿಗೋ 3 ಗಂಟೆ ವಿಳಂಬ:
ಬೆಂಗಳೂರಿನಿಂದ ತೂತುಕುಡಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಮೂರು ಗಂಟೆ 11 ನಿಮಿಷ ತಡವಾಗಿತ್ತು.ನಿನ್ನೆ ಮಧ್ಯಾಹ್ನ 1.15ಕ್ಕೆ ಹೊರಡಬೇಕಿದ್ದ ವಿಮಾನ ಸಂಜೆ 4.26ಕ್ಕೆ ಟೇಕಾಫ್ ಆಗಿದೆ. ವಿಮಾನ ತಡವಾಗಿ ಬರುವುದರಿಂದ ಟೇಕಾಫ್ ತಡವಾಗಲಿದೆ ಎಂದು ಘೊಷಣೆ ಮಾಡಲಾಯಿತು.
ಇದರಿಂದ ಬೇಸರಗೊಂಡ ಪ್ರಯಾಣಿಕ ಎಕ್ಸ್ (ಟ್ವಿಟರ್) ಮೂಲಕ ವಿಮಾನಯಾನ ಸಚಿವಾಲಯಕ್ಕೆ ಟ್ಯಾಗ್ ಮಾಡಿ ಮಧ್ಯಾಹ್ನ 1.15ಕ್ಕೆ ಹೊರಡಬೇಕಿದ್ದ ವಿಮಾನ ಸಂಜೆ 4.26ಕ್ಕೆ ಟೇಕಾಫ್ ಆಗಿದೆ. ಅಲ್ಲದೇ ನಮಗೆ ಅರ್ಧ ಸ್ಯಾಂಡ್ವಿಚ್ ನೀಡಿ ನಮ್ಮನ್ನು ಭಿಕ್ಷುಕರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.