ಸ್ಟಾಕ್ ಮಾರ್ಕೆಟ್ ಒಂದು ಬಗೆಯ ಹಾವು ಏಣಿ ಆಟ ಇದ್ದಂತೆ. ಸರಾಗವಾಗಿ ಸಾಗುತ್ತಿರುವ ಪಯಣದಲ್ಲಿ, ನಷ್ಟವೆಂಬ ಹಾವು ಯಾವಾಗ ಸರ್ರನೆ ಕೆಳಕ್ಕೆಸೆಯುವುದೋ, ಲಾಭವೆಂಬ ಏಣಿ ಯಾವಾಗ ಗೆಲುವಿನ ಶಿಖರವನ್ನೇರಿಸುವುದೋ, ಹೇಳಲಿಕ್ಕೇ ಆಗದು. ಕೆಲವೇ ದಿನಗಳ ಹಿಂದೆ, Twitter, Tesla ಸೇರಿದಂತೆ ಹಲವು ಸಂಸ್ಥೆಗಳ ಒಡೆಯ ಎಲಾನ್ ಮಸ್ಕ್ (Elon Musk) ರವರು ದಾಖಲೆಯ ನಷ್ಟವನ್ನು ಅನುಭವಿಸಿದ್ದರು. ಇದೀಗ ನಷ್ಟದ ಪಾತಾಳದತ್ತ ಹೆಜ್ಜೆಯಿಡುವ ಸರದಿ ಅದಾನಿ ಗ್ರೂಪ್ ಕಂಪನೀಸ್ (Adani Group Companies) ಒಡೆಯರಾಗಿರುವ ಗೌತಮ್ ಅದಾನಿ ಅವರದ್ದಾಗಿದೆ. ಸುಮಾರು 50 ಬಿಲಿಯನ್ ಡಾಲರ್ ( ಭಾರತದ ಕರೆನ್ಸಿಯ ಪ್ರಕಾರ, 4 ಲಕ್ಷ ಕೋಟಿ ರೂ.) ಗೂ ಅಧಿಕ ಮೌಲ್ಯದ ನಷ್ಟವನ್ನು ಅನುಭವಿಸಿರುವ ಅದಾನಿ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಇಳಿದಿದ್ದಾರೆ.
ಬಂದರು ನಿರ್ವಹಣೆ, ವಿದ್ಯುತ್ ಶಕ್ತಿ ಉತ್ಪಾದನೆ ಮತ್ತು ಪ್ರಸರಣ, ನವೀಕರಿಸಬಹುದಾದ ಶಕ್ತಿ, ಗಣಿಗಾರಿಕೆ, ವಿಮಾನ ನಿಲ್ದಾಣ ಕಾರ್ಯಾಚರಣೆಗಳು, ನೈಸರ್ಗಿಕ ಅನಿಲ, ಆಹಾರ ಸಂಸ್ಕರಣೆ ಮತ್ತು ಮೂಲಸೌಕರ್ಯಗಳು ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ವ್ಯಾಪಿಸಿಕೊಂಡಿರುವ ಗೌತಮ್ ಅದಾನಿ, ಒಬ್ಬ ಪ್ರಖ್ಯಾತ ಭಾರತೀಯ ಬಿಲಿಯನೇರ್ ಕೈಗಾರಿಕೋದ್ಯಮಿ. 1988 ರಲ್ಲಿ ತಮ್ಮ 26 ನೇ ವಯಸ್ಸಿನಲ್ಲಿ ಅದಾನಿಯವರು Adani Exports (ನಂತರ Adani Enterprises ಎಂದು ಹೆಸರಿಸಲಾಯಿತು) ಅನ್ನು ಸ್ಥಾಪಿಸಿದರು. 1994 ರಲ್ಲಿ ಮೊದಲ ಬಾರಿಗೆ ಶೇರು ಮಾರುಕಟ್ಟೆಯನ್ನು ಪ್ರವೇಶಿಸಿದರು. ಅಲ್ಲಿಂದ ಇಲ್ಲಿಯವರೆಗೂ ಹಲವು ಏರಿಳಿತಗಳನ್ನು ಕಂಡಿದ್ದರೂ, ಇಷ್ಟು ದೊಡ್ಡ ಮೊತ್ತದ ನಷ್ಟವನ್ನು ಕಾಣುತ್ತಿರುವುದು ಇದೇ ಮೊದಲು.
ನಷ್ಟದ ಹಿನ್ನೆಲೆ –
ಜನವರಿ 24, 2023, ಮಂಗಳವಾರದಂದು US ನ New York ನಗರದಲ್ಲಿ ನೆಲೆಗೊಂಡಿರುವ ಹಿಂಡೆನ್‌ಬರ್ಗ್ ರಿಸರ್ಚ್ ಹೂಡಿಕೆ ಸಂಶೋಧನಾ ಸಂಸ್ಥೆಯು (Hindenburg Research) ಅದಾನಿ ಸಂಸ್ಥೆಯ ಕುರಿತು ಒಂದು ವರದಿಯನ್ನು ಪ್ರಕಟಿಸಿತ್ತು. ಅದರಲ್ಲಿ, ಅದಾನಿ ನೇತೃತ್ವದ Adani Group Companies ‘ಬೃಹತ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆ ಯೋಜನೆಯಲ್ಲಿ ತೊಡಗಿಸಿಕೊಂಡಿದೆ’ ಎಂದು ತೋರಿಸಿತ್ತು. ಬುಧವಾರದಿಂದ ಅದಾನಿ ಶೇರ್ ಗಳ ಮೌಲ್ಯದಲ್ಲಿ ಕುಸಿತ ಕಾಣಲಾರಂಭಿಸಿತ್ತು. ಶುಕ್ರವಾರದಂದು ಯುಎಸ್ ಹೆಡ್ಜ್ ಫಂಡ್ ಬಿಲಿಯನೇರ್ ಬಿಲ್ ಅಕ್ಮನ್ (US hedge fund billionaire Bill Ackman) ಎನ್ನುವವರು ಅದಾನಿ ಸಂಸ್ಥೆಯ ಕುರಿತಾಗಿ ಹಿಂಡೆನ್‌ಬರ್ಗ್ ರಿಸರ್ಚ್ ನೀಡಿದ ವರದಿ ನಂಬಲರ್ಹವೆನಿಸುತ್ತದೆ ಎಂದು ಟ್ವಿಟ್ಟರ್ ಮೂಲಕ ವ್ಯಕ್ತಪಡಿಸಿದ ಬೆನ್ನಲ್ಲೇ ಅದಾನಿ ಶೇರ್ ಗಳ ಮೌಲ್ಯದಲ್ಲಿ ಏಕಾಏಕಿ ಭಾರಿ ಕುಸಿತ ಕಾಣಲಾರಂಭಿಸಿತು. ನೋಡ ನೋಡುತ್ತಲೇ ಕೇವಲ 6 ಗಂಟೆಗಳಲ್ಲಿ, ಅಂದಾಜು ಅವರ ಒಟ್ಟು ಸಂಪತ್ತಿನ ಐದನೇ ಒಂದು ಭಾಗದಷ್ಟು ಮೊತ್ತವನ್ನು ಅದಾನಿಯವರು ಕಳೆದುಕೊಂಡರು.
ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಅದಾನಿ ಗ್ರೂಪ್ಸ್, “ಈ ವರದಿ ಆಧಾರರಹಿತವಾಗಿದೆ ಮತ್ತು ದುರುದ್ದೇಶಪೂರಿತವಾಗಿದೆ. ಇದರ ವಿರುದ್ಧ ಕಾನೂನು ಸಹಾಯವನ್ನು ತೆಗೆದುಕೊಳ್ಳಲಾಗುವುದು” ಎಂದು ಖಂಡಿಸಿದೆ. ಇದಕ್ಕೆ ಉತ್ತರಿಸಿದ ಹಿಂಡೆನ್‌ಬರ್ಗ್, “ಯಾವುದೇ ಕಾನೂನು ಕ್ರಮಗಳಿಗೂ ನಾವು ಸಿದ್ಧರಿದ್ದೇವೆ. ಎರಡು ವರ್ಷಗಳ ಸತತ ಅನ್ವೇಷಣೆಯಿಂದ ನಾವು ನಮ್ಮ ವರದಿಯನ್ನು ತಯಾರಿಸಿದ್ದೇವೆ. ಮತ್ತು ನಾವಿದಕ್ಕೆ ಬದ್ಧರಾಗಿ ಇರಲಿದ್ದೇವೆ. ನಾವು ಕಾರ್ಯನಿರ್ವಹಿಸುವ ಯುಎಸ್(US) ನಲ್ಲಿಯೂ ಮೊಕದ್ದಮೆ ಹೂಡಬೇಕು” ಎಂದಿದೆ.
ಅದಾನಿ ಎಂಟರ್‌ಪ್ರೈಸಸ್ ಈ ತಿಂಗಳು ಹೊಸ ಷೇರುಗಳನ್ನು ನೀಡುವ ಮೂಲಕ 200 ಶತಕೋಟಿ ರೂಪಾಯಿಗಳನ್ನು ($2.5 ಶತಕೋಟಿ) ಸಂಗ್ರಹಿಸುವ ಗುರಿಯನ್ನು ಹೊಂದಿತ್ತು. ಆದರೆ ಇಂತಹ ಸೂಕ್ಷ್ಮ ಸಮಯದಲ್ಲಿ ಹಿಂಡೆನ್‌ಬರ್ಗ್‌ನ ವರದಿ ಪ್ರಕಟಗೊಂಡಿದ್ದು ಅದಾನಿ ಗ್ರೂಪ್ಸ್ ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಇದರೊಟ್ಟಿಗೆ, ಇವರೀರ್ವರ ಯುದ್ಧವು ಜಾಗತಿಕ ಹೂಡಿಕೆದಾರರ ಅಭಿಪ್ರಾಯಗಳಲ್ಲಿ ಭೇದವನ್ನು ತಂದಿದೆ. ಅನೇಕ ಭಾರತೀಯ ವಿಶ್ಲೇಷಕರ ಪ್ರಕಾರ, ಅದಾನಿ ಗ್ರೂಪ್ಸ್ ಗೆ ಈ ವರದಿಯಿಂದ ಹೆಚ್ಚೇನೂ ವ್ಯತ್ಯಾಸ ಆಗಲಾರದು. ಯಾಕೆಂದರೆ ಅದಾನಿ ಮತ್ತು ಪ್ರಧಾನ ಮಂತ್ರಿ ಮೋದಿಯವರ ನಡುವೆ ಆರೋಗ್ಯಕರ ಸಂಬಂಧವಿದೆ. ಹಾಗಾಗಿ, ಭಾರತೀಯ ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್ಸ್ ಹೆಚ್ಚು ವ್ಯತ್ಯಾಸವನ್ನು ಕಾಣದೇ ಇರಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಅದಾನಿ ಗ್ರೂಪ್ಸ್ ತನ್ನ ಮೇಲೆ ಬಂದಿರುವ ಆರೋಪವನ್ನು ಸಮರ್ಥವಾಗಿ ಖಂಡಿಸಿಲ್ಲ ಎನ್ನುವುದು ಇತರ ಕೆಲವು ವಿಶ್ಲೇಷಕರ ಅಭಿಪ್ರಾಯ.
ಅನಿರೀಕ್ಷಿತ ಬೆಳವಣಿಗೆಗಳಿಂದ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲವನ್ನು ಹುಟ್ಟಿಸಿರುವ ಈ ಪ್ರಕರಣದ ಮುಂದಿನ ತಿರುವನ್ನು ಕಾದುನೋಡಬೇಕಿದೆ.