ಬೆಂಗಳೂರು : ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ದೊಡ್ಡ ಮಟ್ಟದ ಪಕ್ಷಾಂತರಕ್ಕೆ ವೇದಿಕೆ ಸಜ್ಜುಗೊಂಡಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂದು ಲಿಂಗಾಯತ ಸಮುದಾಯ ಅಸಮಾಧಾನಗೊಂಡಿದೆ ಇದರ ಬೆನ್ನಲ್ಲೇ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳು ನಮ್ಮ ಗೆಲುವಿಗೆ ಅಡ್ಡಿಯಾಗಲಿದೆ ಎಂದು ಭಾವಿಸಿರುವ ಮಂತ್ರಿಗಳು ಮತ್ತು ಶಾಸಕರು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಒಲವು ವ್ಯಕ್ತವಾಗುತ್ತಿದೆ ಎಂಬ ಸಮೀಕ್ಷಾ ವರದಿಗಳನ್ನು ಆಧರಿಸಿ, ಸಚಿವರಾದ ವಿ.ಸೋಮಣ್ಣ, ಡಾ.ಕೆ.ಸಿ.ನಾರಾಯಣಗೌಡ, ಶಾಸಕರಾದ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಪೂರ್ಣಿಮಾ, ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ್, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮೊಳಕಾಲ್ಮೂರು ಕ್ಷೇತ್ರದ ಮಾಜಿ ಶಾಸಕ ಎನ್.ವೈ.ಗೋಪಾಲಕೃಷ್ಣ, ದೊಡ್ಡಬಳ್ಳಾಪುರದ ನರಸಿಂಹಸ್ವಾಮಿ ಸೇರಿದಂತೆ ಅನೇಕರು ಕಾಂಗ್ರೆಸ್ ಸೇರುವ ಸಾಧ್ಯತೆಗಳಿವೆ.
ಈಗಾಗಲೇ ಜೆಡಿಎಸ್‍ನಿಂದ ದೂರ ಉಳಿದಿರುವ ಅರಸೀಕೆರೆಯ ಶಿವಲಿಂಗೇಗೌಡ,ಅರಕಲಗೂಡು ಕ್ಷೇತ್ರದ ಎ.ಟಿ.ರಾಮಸ್ವಾಮಿ, ಗುಬ್ಬಿಯ ಎಸ್.ಆರ್. ಶ್ರೀನಿವಾಸ್,ಅವರು ಕಾಂಗ್ರೆಸ್ ಸೇರಲಿದ್ದು
ಸೇರ್ಪಡೆಗೆ ಸಮಯ ನಿಗದಿಯಾಗುವುದು ಮಾತ್ರ ಬಾಕಿಯಿದೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗಲು ಕಾರಣವಾದ 14 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಮೂವರು ವಲಸಿಗ ಶಾಸಕರ ಪೈಕಿ ನಾಲ್ಕು ಮಂದಿ ಕಾಂಗ್ರೆಸ್ ಬಾಗಿಲಲ್ಲಿ ನಿಂತಿದ್ದಾರೆ. ಇವರಲ್ಲಿ ಸಂಪುಟದಲ್ಲಿ ಪ್ರಭಾವಿಗಳಾಗಿರುವ ಸಚಿವರ ಹೆಸರು ಇವೆ ಎಂದು ಹೇಳಲಾಗಿದೆ.
ವಲಸಿಗರ ಸೇರ್ಪಡೆ ಕುರಿತು ಕಾಂಗ್ರೆಸ್ ನಾಯಕರು ಎಚ್ಚರಿಕೆಯ ನಡೆ ಇಡುತ್ತಿದೆ.ನಾಯಕರ ಸೇರ್ಪಡೆಯನ್ನು ಖುದ್ದು ಡಿ.ಕೆ.ಶಿವಕುಮಾರ್ ನಿರ್ವಹಣೆ ಮಾಡುತ್ತಿದ್ದು, ಸಿದ್ದರಾಮಯ್ಯ ಸಾಥ್ ನೀಡಿದ್ದಾರೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಈ ಬೆಳವಣಿಗೆಗೆ ಅಸ್ತು ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯದ ಕೆ.ಆರ್.ಪೇಟೆ ಶಾಸಕ ಹಾಗೂ, ಸಚಿವ ಕೆ.ಸಿ.ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೆ ಬಹುತೇಕ ವೇದಿಕೆ ಸಜ್ಜುಗೊಂಡಿದೆ. ನಿನ್ನೆ ರಾತ್ರಿ ಕೆ.ಆರ್.ಪೇಟೆ ಕ್ಷೇತ್ರದ ಮಾಜಿ ಶಾಸಕ ಚಂದ್ರಶೇಖರ್ ಅವರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತುಕತೆ ನಡೆಸಿ ಸಂಧಾನ ನಡೆಸಿದ್ದು ಇದು ಯಶಸ್ವಿಯಾಗಿದೆ ಎನ್ನಲಾಗಿದೆ.
ಮತ್ತೊಂದೆಡೆ ಕಾಂಗ್ರೆಸ್‍ನ ಪ್ರಭಾವಿ ನಾಯಕ ಕೃಷ್ಣಪ್ಪ ಮತ್ತು ಅವರ ಪುತ್ರ ಪ್ರಿಯಾಕೃಷ್ಣ ಅವರನ್ನು ಮನವೋಲಿಸಿ ಸಚಿವ ಸೋಮಣ್ಣ ಅವರ ಜೊತೆ ಸಂಧಾನ ಮಾಡಿಸಲು ನಾಯಕರು ಯತ್ನಿಸುತ್ತಿದ್ದಾರೆ. ಕೃಷ್ಣಪ್ಪ ಮತ್ತು ಸೋಮಣ್ಣ ಒಂದಾದರೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗಲಿದೆ ಎಂಬ ವಾದ ಮಂಡಿಸಲಾಗುತ್ತಿದೆ.
ಅದೇ ರೀತಿಯಲ್ಲಿ ಯಾದವ ಸಮುದಾಯದ ನಾಯಕರ ಕೊರತೆ ಎದುರಿಸುತ್ತಿರುವ ಕಾಂಗ್ರೆಸ್ ಈ ಸಮುದಾಯದ ನಾಯಕಿ ಹಾಗೂ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಉತ್ಸುಕತೆ ತೋರಿದೆ.ಪೂರ್ಣಿಮಾ ಅವರು ಕಾಂಗ್ರೆಸ್ ಸೇರಿದರೆ ಅವರಿಗೆ ಬೆಂಗಳೂರಿನ ಕೆ.ಆರ್.ಪುರಂ ಇಲ್ಲವೇ ಹಿರಿಯೂರು ಕ್ಷೇತ್ರದಿಂದ ಕಣಕ್ಕಿಳಿಯಲು ಅವಕಾಶ ನೀಡುವ ಭರವಸೆ ನೀಡಿದೆ ಎನ್ನಲಾಗಿದೆ.
ಸದ್ಯ ಹಿರಿಯೂರು ಕ್ಷೇತ್ರದ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಕೆ.ಸುಧಾಕರ್ ಅವರ ಜೊತೆ ಶಿವಕುಮಾರ್ ಮಾತುಕತೆ ನಡೆಸುತ್ತಿದ್ದು, ರಾಜಿಸೂತ್ರ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕ್ಷೇತ್ರದಲ್ಲಿ ಒಂದು ವೇಳೆ ಪೂರ್ಣಿಮಾ ಸ್ಪರ್ಧೆ ಮಾಡದೆ ಹೋದರೆ ಅವರ ಪತಿ ಶ್ರೀನಿವಾಸ್ ಅವರಿಗೆ ಅವಕಾಶ ನೀಡಲಾಗುತ್ತದೆ ಎಂದು ಗೊತ್ತಾಗಿದೆ.
ಹಾಗೆಯೇ ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಕೂಡ ಕಾಂಗ್ರೆಸ್ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತದಲ್ಲಿದ್ದರೂ ಬಿಜೆಪಿ ತನ್ನ ಜನಪ್ರತಿನಿಗಳನ್ನು ಉಳಿಸಿಕೊಳ್ಳಲಾಗದೆ ಇರಿಸುಮುರಿಸಿಗೆ ಒಳಗಾಗಿದೆ. ಇದು ಕಾಂಗ್ರೆಸ್‍ಗೆ ವರದಾನವಾಗಿದೆ. ಆಪರಷನ್ ಕಮಲಕ್ಕೆ ಸಿಲುಕಿ ಬಿಜೆಪಿ ಪಾಲಾಗಿದ್ದವರು ಈಗ ಮರಳಿ ತವರಿನತ್ತ ಮುಖ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಬಹಳಷ್ಟು ಶಾಸಕರು ಬಿಜೆಪಿ ಸೇರುತ್ತಾರೆ ಎಂಬ ವದ್ಧಂತಿಗಳಿದ್ದವು. ಶೇ.40ರಷ್ಟು ಕಮಿಷನ್ ಆರೋಪ ಬಿಜೆಪಿಗೆ ಭಾರೀ ಹಿನ್ನೆಡೆಯಾಗಿತ್ತು. ಅದರ ಬೆನ್ನಲ್ಲೆ ಚೆನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರನ ಮೇಲೆ ಲೋಕಾಯುಕ್ತ ದಾಳಿ, ಅದೇ ಪ್ರಕರಣದಲ್ಲಿ ಶಾಸಕರು ಮೊದಲ ಆರೋಪಿಯಾಗುತ್ತಿದ್ದಂತೆ ರಾಜಕೀಯ ಪರಿಸ್ಥಿತಿ ಬದಲಾಗಿದೆ.
ಕಾಂಗ್ರೆಸ್‍ನಿಂದ ಬಿಜೆಪಿಯತ್ತ ಮುಖ ಮಾಡಿದ್ದವರು ಹಿಂದೇಟು ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‍ಗೆ ಭವಿಷ್ಯವಿದೆ ಎಂಬ ನಿರೀಕ್ಷೆಗಳು ಹುಟ್ಟಿವೆ. ಪಕ್ಷದಲ್ಲೇ ಉಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಬಿಜೆಪಿಯಲ್ಲಿದ್ದವರು ಕೇಂದ್ರ ತನಿಖಾ ಸಂಸ್ಥೆಗಳ ಭಯದಿಂದ ರಾಜಕೀಯ ನಿರ್ಧಾರ ತೆಗೆದುಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದವರು ಪುಟ್ಟಣ್ಣ ಸೇರ್ಪಡೆಯ ಬಳಿಕ ದೃಢ ನಿಶ್ಚಯ ಮಾಡಿ ಕಾಂಗ್ರೆಸ್ ನಾಯಕರನ್ನು ಸಂಪರ್ಕ ಮಾಡುತ್ತಿದ್ದಾರೆ ಎನ್ನಲಾಗಿದೆ.
BJPಗೆ ಗುಡ್ ಬೈ ಹೇಳಲು ಸಜ್ಜಾದ ಪೂರ್ಣಿಮಾ, ಸೋಮಣ್ಣ, ಶ್ರೀಮಂತ ಪಾಟೀಲ್
Previous Articleವಿಧಾನಸಭೆಗೆ ಎರಡು ಹಂತದಲ್ಲಿ ಚುನಾವಣೆ!
Next Article BJP ಉನ್ನತ ಸಮಿತಿಗಳ ರಚನೆ-ಹುಸಿಯಾದ ನಿರೀಕ್ಷೆ