ಬೆಂಗಳೂರು, ಜ.20- ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ವೇಳೆ ಗೋಧ್ರಾ ಮಾದರಿಯ ವಿಧ್ವಂಸಕ ಕೃತ್ಯ ನಡೆಯಲಿದೆ ಎಂಬ ವಿವಾದಾತ್ಮ ಹೇಳಿಕೆ ನೀಡಿದ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲು ಯತ್ನಿಸಿದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಸೃಷ್ಟಿಸಿದೆ. ತಮ್ಮ ವಿಚಾರಣೆಗೆ ಮುಂದಾದ ಸಿಸಿಬಿ ಪೊಲೀಸರಿಗೆ ಬಂಧಿಸುವಂತೆ ಸವಾಲು ಹಾಕಿದ್ದ ಹರಿಪ್ರಸಾದ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೋ ಆರ್ ಎಸ್.ಎಸ್.ಸರ್ಕಾರ ಇದೆಯೋ ಎಂದು ಕಿಡಿಕಾರಿದ್ದರು.
ಈ ವಿವಾದದ ಬೆನ್ನಲ್ಲೇ ಅವರನ್ನು ವಿಚಾರಣೆ ಮಾಡಲು ಮುಂದಾದ ಕ್ರಮದ ಹಿಂದೆ ರಾಜ್ಯಪಾಲ ಕಚೇರಿಯ ಹಸ್ತಕ್ಷೇಪ ಇದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಕಚೇರಿಯಿಂದ ವಿಚಾರಣೆಯ ಬಗ್ಗೆ ಪದೇಪದೇ ಮಾಹಿತಿ ಕೇಳಲಾಗಿದೆ. ಯಾವ ರೀತಿ ತನಿಖೆ ನಡೆಯುತ್ತಿದೆ ಎಂದು ರಾಜ್ಯಪಾಲರು ಪ್ರಶ್ನಿಸಿದ್ದರಿಂದಾಗಿ ಅವರ ಮಾತಿಗೆ ಗೌರವ ಕೊಟ್ಟು ಗೃಹ ಇಲಾಖೆಯ ಅಕಾರಿಗಳು ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆ ಪಡೆಯಲು ಪ್ರಯತ್ನಿಸಿದ್ದಾರೆ. ಇದು ಅಷ್ಟಕ್ಕೇ ಮಾತ್ರ ಸೀಮಿತ ಎಂದು ತಿಳಿಸಿದರು.
ಅದನ್ನು ತಿರುಚಿ ಸರ್ಕಾರ ಅಥವಾ ಗೃಹ ಇಲಾಖೆ ಪೊಲೀಸರನ್ನು ಕಳುಹಿಸಿ ಬಿ.ಕೆ.ಹರಿಪ್ರಸಾದ್ ಅವರಿಗೆ ಮುಜುಗರ ಉಂಟುಮಾಡಲು ಪ್ರಯತ್ನಿಸಿದೆ ಎಂಬುದು ಸರಿಯಲ್ಲ ಎಂದರು. ಈ ವಿಷಯವಾಗಿ ರಾಜ್ಯಪಾಲರು ಏಕೆ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನ ಇದೆಯೇ, ರಾಜ್ಯಸರ್ಕಾರಕ್ಕೆ ಮತ್ತು ಹರಿಪ್ರಸಾದ್ ಅವರಿಗೆ ಮುಜುಗರ ಉಂಟುಮಾಡಲು ಪ್ರಯತ್ನಿಸಲಾಗಿದೆಯೇ ಎಂಬ ಪ್ರಶ್ನೆಗಳಿವೆ ಎಂದರು ಕೇಂದ್ರ ಸರ್ಕಾರ ಪ್ರತ್ಯೇಕ ಮಾದರಿಯನ್ನು ಅನುಸರಿಸುತ್ತಿದೆ. ಎಲ್ಲೆಲ್ಲಿ ಬಿಜೆಪಿಯೇತರ ಸರ್ಕಾರಗಳಿವೆ, ರಾಜ್ಯಪಾಲರ ಮೂಲಕ ಆಡಳಿತ ನಡೆಸುವ ಪ್ರಯತ್ನ ಮಾಡುತ್ತದೆ, ಏನೇ ಇದ್ದರೂ ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು. ಕಾನೂನು ಸುವ್ಯವಸ್ಥೆ ಮತ್ತು ರಾಜ್ಯಪಾಲರ ಕಚೇರಿಗೆ ಏನು ಸಂಬಂಧ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಷ್ಟ್ರಪತಿಯವರ ಆಳ್ವಿಕೆಯಿರುವ ಪರಿಸ್ಥಿತಿ ಇದೆ ಅಥವಾ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಿದೆ ಎಂಬ ಪರಿಸ್ಥಿತಿ ಇದ್ದರೆ ಆಗ ರಾಜ್ಯಪಾಲರು ಪ್ರಶ್ನೆ ಮಾಡಬಹುದು. ಈಗ ಅಂತಹ ಯಾವ ಪರಿಸ್ಥಿತಿ ಇದೆ ಎಂದು ಪ್ರಶ್ನಿಸಿದರು.
ಸರ್ಕಾರದ ಪಾತ್ರವಿಲ್ಲ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಪರಮೇಶ್ವರ್, ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ.ಅವರಿಗೆ ಕಿರುಕುಳ ನೀಡಬೇಕೆಂದು ಯಾರೂ ಬಯಸುತ್ತಿಲ್ಲ ಎಂದು ಸ್ಪಷ್ಟ ಪಡಿಸಿದರು.
ಹರಿಪ್ರಸಾದ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದ ಸುದ್ದಿ ರಾಜ್ಯಪಾಲರ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅವರು ಸೂಚಿಸಿದ್ದರು. ಅದರನ್ವಯ ಕಾನೂನು ಚೌಕಟ್ಟಿನಲ್ಲಿ ಏನು ಕೆಲಸ ಮಾಡಬೇಕು ಅದನ್ನು ಪೊಲೀಸರು ಮಾಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚು ಪ್ರತಿಕ್ರಿಯಿಸಲು ಹೋಗುವುದಿಲ್ಲ’ ಎಂದು ತಿಳಿಸಿದರು.
ಪ್ರಶ್ನಾರ್ಹ ಕ್ರಮ:
ಈ ವಿಚಾರವಾಗಿ ಮತ್ತೊಮ್ಮೆ ತಮ್ಮ ನಿಲುವು ತಿಳಿಸಿರುವ ಹರಿಪ್ರಸಾದ್,ಸಿಸಿಬಿ ಅಧಿಕಾರಿಗಳು ತಮ್ಮನ್ನು ವಿಚಾರಣೆಗೆ ಒಳಪಡಿಸಲು ಬಂದ ವೇಳೆ ಶಿಷ್ಠಾಚಾರ ಪಾಲನೆ ಆಗಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎಲ್ಲಾ ದೂರುಗಳಲ್ಲೂ ರಾಜ್ಯಪಾಲರು ಇಷ್ಟೇ ಕ್ಷಿಪ್ರವಾಗಿ ವಿಚಾರಣೆ ನಡೆಸಲು ಹೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ತಾವು ನೀಡಿದ್ದ ಹೇಳಿಕೆ ಕುರಿತು ಬಿಜೆಪಿಯವರು ರಾಜ್ಯಪಾಲರಿಗೆ ದೂರು ನೀಡಿದ್ದರು ಅದರ ಆಧಾರದಲ್ಲಿ ರಾಜ್ಯಪಾಲರು ತನಿಖೆಗೆ ಸೂಚಿಸಿದ್ದಾರೆ ಎಂದು ಹೇಳಿದರು ರಾಜ್ಯಪಾಲರ ಕಚೇರಿಗೆ ಬರುವ ಎಲ್ಲಾ ದೂರುಗಳ ಬಗ್ಗೆಯೂ ಇದೇ ರೀತಿ ಕ್ಷಿಪ್ರ ವಿಚಾರಣೆ ನಡೆಯುತ್ತವೆಯೇ? ತಮ್ಮ ಕುರಿತಾದ ದೂರಿಗೆ ಸಂಬಂಧಿಸಿದಂತೆ ಮಾತ್ರ ವಿಶೇಷ ವೇಗ ಇರುವುದಾದರೆ, ಅದನ್ನು ಬೇರೆ ರೀತಿ ಅರ್ಥೈಸಬೇಕಾಗುತ್ತದೆ ಎಂದು ತಿಳಿಸಿದರು.
ತಮ್ಮನ್ನು ವಿಚಾರಣೆ ನಡೆಸುವ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿತ್ತು ಎಂದು ಪೊಲೀಸರು ಆಯುಕ್ತರು ತಿಳಿಸಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ?. ಸಿಸಿಬಿ ಅಧಿಕಾರಿಗಳು ತಮ್ಮ ಬಳಿಗೆ ಬಂದು ಹೋದ ನಂತರ ಗೃಹ ಸಚಿವರಿಗೆ ಮಾಹಿತಿ ಸಿಕ್ಕಿದೆ ಎಂದರು.

