ಬೆಂಗಳೂರು, ನ.5- ಮಹಾನಗರಿ ಬೆಂಗಳೂರಿನ ಸುಬ್ರಹ್ಮಣ್ಯಪುರದ ಅಪಾರ್ಟ್‌ಮೆಂಟ್ ವೊಂದರಲ್ಲಿ ನೆಲೆಸಿದ್ದ ಗಣಿ ಭೂ ವಿಜ್ಞಾನ ಇಲಾಖೆಯ ಮಹಿಳಾ ಉಪ ನಿರ್ದೇಶಕಿಯನ್ನು ಚಾಕುವಿನಿಂದ ಇರಿದು ಕತ್ತು ಕೊಯ್ದು ಭೀಕರವಾಗಿ ಕೊಲೆ (Murder) ಮಾಡಲಾಗಿದ್ದು ಕೃತ್ಯದಿಂದ ನಗರದ ಜನತೆ ಬೆಚ್ಚಿಬಿದ್ದಿದೆ.
ಸುಬ್ರಹ್ಮಣ್ಯಪುರದ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್ ನಲ್ಲಿ ಫ್ಲಾಟ್ ನಲ್ಲಿ ವಾಸಿಸುತ್ತಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ (45) ಕೊಲೆಯಾಗಿದ್ದು, ಹಂತಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪರಿಚಯಸ್ಥರ ನೆಪದಲ್ಲಿ ಗೋಕುಲ್ ಅಪಾರ್ಟ್‌ಮೆಂಟ್ ಗೆ ಬಂದು ಫ್ಲಾಟ್ ಗೆ ನುಗ್ಗಿದ ದುಷ್ಕರ್ಮಿಗಳು, ಮಹಿಳಾ ಅಧಿಕಾರಿ ಒಬ್ಬರೇ ಇದ್ದಾಗ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಭೂಗರ್ಭ ಶಾಸ್ತ್ರ ವಿಭಾಗದಲ್ಲಿ ಉಪ ನಿರ್ದೇಶಕಿಯಾಗಿ ಪ್ರತಿಮಾ ಕರ್ತವ್ಯ ನಿರ್ವಹಿಸುತ್ತಿದ್ದರು.ಪ್ರತಿಮಾ ಅವರ ಪತಿ ಮತ್ತು ಪುತ್ರ ತೀರ್ಥಹಳ್ಳಿಯಲ್ಲಿ ವಾಸವಿದ್ದರು.
ರಾತ್ರಿ 8 ಗಂಟೆಗೆ ಕಛೇರಿಯಿಂದ ಮನೆಗೆ ಕಾರಿನಲ್ಲಿ ಚಾಲಕ ಬಿಟ್ಟು ತೆರಳಿದ ಬಳಿಕ ಹಂತಕರು ಬಂದು ಕೊಲೆ ಮಾಡಿ ಹೋಗಿದ್ದಾರೆ ಎನ್ನಲಾಗಿದೆ
ಮನೆಯ ಒಳಗೆ ಬಂದು ಕೊಲೆ ಮಾಡಿ ಹೋಗಿರುವ ಕಾರಣ ಮೇಲ್ನೋಟಕ್ಕೆ ಇದು ಸಂಚು ರೂಪಿಸಿ ಪರಿಚಿತರೇ ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ರಾತ್ರಿ ಪ್ರತಿಮಾ ಅವರಿಗೆ ಅಣ್ಣ ಕರೆ ಮಾಡಿದ್ದ, ಆದರೆ ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಹೀಗಾಗಿ ಇದೊಂದು ಪೂರ್ವ ನಿಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿದೆ.
ತೀರ್ಥಹಳ್ಳಿಯ ತುಡುಕಿ ಗ್ರಾಮದ ಸತ್ಯನಾರಾಯಣ ಅವರನ್ನು ಕಳೆದ 18 ವರ್ಷಗಳ ಹಿಂದೆ ಪ್ರತಿಮಾ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಪ್ರತಿಮಾಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ನೌಕರಿ ಸಿಕ್ಕಿತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಕೆಲಸದ ನಿಮಿತ್ತ ತೆರಳಿದ್ದರು. ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರ ದಾಂಪತ್ಯಕ್ಕೆ 15 ವರ್ಷದ ಎಸ್ ಎಸ್ ಎಲ್ ಸಿ ಓದುವ ಮಗನಿದ್ದಾನೆ. ತುಡುಕಿಯಲ್ಲಿ ಇತ್ತೀಚೆಗೆ ಹೊಸ ಮನೆ ಯೊಂದನ್ನು ಕಟ್ಟಿಸಿ ಗೃಹಪ್ರವೇಶ ಮಾಡಿದ್ದರು.
ಸುಮಾರು ಎರಡು ಎಕರೆಯಷ್ಟು ಅಡಿಕೆ ತೋಟ ಇರುವ ಹಿನ್ನೆಲೆಯಲ್ಲಿ ಅಡಿಕೆ ಕೊಯ್ಲು ಮಾಡಿಸುವ ಸಲುವಾಗಿ ಪತಿ ಮತ್ತು ಮಗ ತೀರ್ಥಹಳ್ಳಿಯಲ್ಲಿ ಇದ್ದರು. ಪ್ರತಿಮಾ ಹಾಗೂ ಸತ್ಯನಾರಾಯಣ ಅವರ ದಾಂಪತ್ಯ ಜೀವನ ಅನ್ಯೊನ್ಯವಾಗಿತ್ತು.
ರಾತ್ರಿ ಅಣ್ಣ ಕರೆ ಮಾಡಿದಾಗ ಪ್ರತಿಮಾ ಕರೆ ಸ್ವೀಕರಿಸಿಲ್ಲ. ಬೆಳಿಗ್ಗೆ ಮನೆ ಬಳಿ ಹೋಗಿ ನೋಡಿದಾಗ ಘಟನೆ ಬೆಳಕಿಗೆ. ಮನೆಯಲ್ಲಿ ಯಾವುದೇ ವಸ್ತು ಕಳ್ಳತನವಾಗಿಲ್ಲ. ಮೇಲ್ನೋಟಕ್ಕೆ ಉದ್ದೇಶಪೂರ್ವಕ ಕೊಲೆ ನಡೆದಿದೆ ಎಂಬ ಅನುಮಾನ ಮನೆಯವರಲ್ಲಿ ಹುಟ್ಟಿಕೊಂಡಿದೆ.
ಪತ್ನಿಯ ಕೊಲೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಪತಿ ಸತ್ಯನಾರಾಯಣ ಆಗಮಿಸಿದ್ದಾರೆ.ಘಟನಾ ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಶಹಪುರವಾಡ್ ಅವರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ
ಪರಿಚಿತರಿಂದಲೇ ಕೊಲೆಯಾಗಿರುವ ಅನುಮಾನ ಇರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿರುವ ಸುಬ್ರಮಣ್ಯಪುರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದು ಕೊಲೆ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.