ಅಹ್ಮದಾಬಾದ್: ಗುಜರಾತ್ ಟೈಟಾನ್ಸ್ ತಂಡದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿದ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಕುಸಿತ ಕಂಡು ಎರಡನೇ ಬಾರಿ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಪ್ರಥಮ ಪ್ರವೇಶದಲ್ಲೇ ಟೂರ್ನಿಯುದ್ದಕ್ಕೂ ಅದ್ಭುತವಾಗಿ ಆಡಿದ ಗುಜರಾತ್ ಟೈಟಾನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.
ಟಾಸ್ ಗೆದ್ದ ರಾಜಸ್ಥಾನ್ ಅಚ್ಚರಿ ಎಂಬಂತೆ ಬ್ಯಾಟಿಂಗ್ ಆಯ್ದುಕೊಂಡಿತು. ಜೋಸ್ ಬಟ್ಲರ್ ಮತ್ತೊಮ್ಮೆ ಅಬ್ಬರಿಸುವ ಸೂಚನೆ ನೀಡಿದರೂ 35 ರನ್‌ಗಳಿಗೆ ಅವರ ಇನ್ನಿಂಗ್ ಸಮಾಪ್ತಿಯಾಯಿತು. ಆದರೆ. ಅವರೇ ತಂಡದ ಪರ ಗರಿಷ್ಠ ಸ್ಕೋರರ್ ಆದರೆಂಬುದು ಉಲ್ಲೇಖನೀಯ. ಯಶಸ್ವಿ ಜೈಸ್ವಾಲ್ 22 ರನ್ ಗಳಿಸಿದರು. ಮಿಕ್ಕ ಯಾರೂ ನೆಲಕಚ್ಚಿ ಆಡದ ಕಾರಣ ತಂಡವು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 130 ರನ್ ಗಳಿಸಲು ಶಕ್ತವಾಯಿತು. ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯಾ 17 ರನ್ ನೀಡಿ 3 ವಿಕೆಟ್ ಕಿತ್ತರೆ, ಸಾಯಿ ಕಿಶೋರ್ 2 ವಿಕೆಟ್ ಪಡೆದರು.
ಗುಜರಾತ್ ಆರಂಭವೂ ಉತ್ತಮವಾಗಿರಲಿಲ್ಲ. ಎರಡು ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೂ ಆರಂಭಕಾರ ಶುಭಮಾನ್ ಗಿಲ್ ತಾಳ್ಮೆಯಿಂದ ಆಡಿದರು. 43 ಎಸೆತಗಳಿಂದ 45 ರನ್ ಗಳಿಸಿ ಅವರು ಅಜೇಯರಾಗಿ ಉಳಿದರು. ನಾಯಕ್ ಹಾರ್ದಿಕ್ ಪಾಂಡ್ಯಾ 30 ಎಸೆತಗಳಲ್ಲಿ 34 ರನ್ ಗಳಿಸಿದರು. ಬಳಿಕ ಬಂದ ಡೇವಿಡ್ ಮಿಲ್ಲರ್ ಎಂದಿನಂತೆ ಅಬ್ಬರಿಸಿ, 19 ಎಸೆತಗಳಿಂದ ಅಜೇಯ 31 ರನ್ ಕಲೆ ಹಾಕಿ ತಂಡದ ಗೆಲುವನ್ನು ಸುಲಭಗೊಳಿಸಿದರು.
ಜೋಸ್ ಬಟ್ಲರ್ ಟೂರ್ನಿಯಲ್ಲಿ 17 ಪಂದ್ಯಗಳಿಂದ 4 ಶತಕ, 4 ಅರ್ಧಶತಕಗಳೊಂದಿಗೆ 863 ರನ್ ಕಲೆಹಾಕಿ, ಆರೆಂಜ್ ಕ್ಯಾಪ್ ಗೆದ್ದರು. ಟೂರ್ನಿಯಲ್ಲಿ ಅವರು 45 ಸಿಕ್ಸರ್ ಹಾಗು 83 ಬೌಂಡರಿ ಗಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. 15 ಪಂದ್ಯಗಳಿಂದ 2 ಶತಕ, 4 ಅರ್ಧ ಶತಕಗಳ ಸಹಿತ 616 ರನ್ ಸಂಪಾದಿಸಿದ ಕೆ.ಎಲ್. ರಾಹುಲ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಕ್ವಿಂಟನ್ ಡಿಕಾಕ್ ಕೂಡ 500ರ ಗಡಿ ದಾಟಿದ್ದಾರೆ (508 ರನ್).
ಯಜುವೇಂದ್ರ ಚಹಲ್ 17 ಪಂದ್ಯಗಳಿಂದ 19.51 ಸರಾಸರಿಯಲ್ಲಿ 27 ವಿಕೆಟ್ ಗಳಿಸಿ, ಪರ್ಪಲ್ ಕ್ಯಾಪ್ ಧರಿಸಿದರು. ವನಿಂದು ಹಸರಂಗ 16 ಪಂದ್ಯಗಳಿಂದ 26 ವಿಕೆಟ್ ಕಿತ್ತು ಗಮನ ಸೆಳೆದರು.