ಬೆಂಗಳೂರು – ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಮೂಲಕ ದೊಡ್ಡ ಹೊಡೆತ ಎದುರಿಸಿದ ಬಿಜೆಪಿ ನಾಯಕ ಸಿ.ಟಿ.ರವಿ ಸೋಲಿನಿಂದ ಎದೆಗುಂದದೆ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆದಿದ್ದರು. ಆದರೆ,ಇವರ ಮಹತ್ವಾಕಾಂಕ್ಷೆಗೆ ಪಕ್ಷದ ಹೈಕಮಾಂಡ್ ಭಾರಿ ಹೊಡೆತ ನೀಡುವ ಮೂಲಕ ತಣ್ಣೀರೆರಚಿದೆ.
ಚುನಾವಣೆ ಸೋತರೂ ಪಕ್ಷದಲ್ಲಿ ಉನ್ನತ ಹುದ್ದೆ ಸಿಗಬಹುದು ಎಂಬ ನಿರೀಕ್ಷೆಯೊಂದಿಗೆ ಉತ್ಸಾಹದಿಂದ ಮುನ್ನಡೆಯುತ್ತಿದ್ದ ಸಿ.ಟಿ.ರವಿ ತಾನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅಷ್ಟೇ ಅಲ್ಲ,ಮಹಾರಾಷ್ಟ್ರ, ಗೋವಾ , ತಮಿಳುನಾಡು ಉಸ್ತುವಾರಿ ಎಂದು ಹೇಳುತ್ತಿದ್ದರು.ಆದರೆ ಹೈಕಮಾಂಡ್ ಈ ಎಲ್ಲಾ ಹುದ್ದೆಗಳಿಗೆ ಖೊಕ್ ನೀಡಿದೆ.
ಪಕ್ಷದ ರಾಷ್ಟ್ರೀಯ ಮಂಡಳಿ ಪುನರಾಚನೆ ಮಾಡಲಾಗಿದ್ದು ಸಂಘಟನಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿರುವ ಸಂತೋಷ್,ಅವರನ್ನು ಹೊರತುಪಡಿಸಿ ಕರ್ನಾಟಕದ ಬೇರೆ ಯಾರಿಗೂ ಅವಕಾಶ ನೀಡಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೈಕಮಾಂಡ್ ನಿರೀಕ್ಷೆ ಇಟ್ಟುಕೊಂಡಿತ್ತು. ರಾಜ್ಯದ ನಾಯಕರೂ ಕೂಡ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದು ಹೇಳಿದ್ದರು.ಆದರೆ ಈ ಎಲ್ಲಾ ನಿರೀಕ್ಷೆಗಳನ್ನು ಮತದಾರರು ಹುಸಿಗೊಳಿಸಿದ್ದಾರೆ.
ಈ ಸೋಲಿನ ಬೆನ್ನಲ್ಲೇ ಪಕ್ಷದಲ್ಲಿ ಹಲವು ಬದಲಾವಣೆಗಳು ನಡೆಯುತ್ತಿವೆ.ರಾಜ್ಯ ನಾಯಕರ ಬಗ್ಗೆ ಹೈಕಮಾಂಡ್ ತೀವ್ರ ಅಸಮಧಾನ ಹೊಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡದೆ ರಾಜ್ಯ ನಾಯಕರು ಮುಜುಗರ ಅನುಭವಿಸುವಂತೆ ಮಾಡಿದ್ದಾರೆ. ಇದರ ಮುಂದುವರಿದ ಭಾಗವಾಗಿ ರಾಜ್ಯಾಧ್ಯಕ್ಷರ ರೇಸ್‌ನಲ್ಲಿದ್ದ ಸಿ.ಟಿ.ರವಿ ಅವರನ್ನು ಇದೀಗ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಡುವ ಮೂಲಕ ಅಚ್ಚರಿ ಮೂಡಿಸಿದೆ.