ರಾಯಚೂರು, ಏ.23- ಹನುಮಾನ್ ಜಯಂತಿ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಿಂದ ನೀರು ತರಲು ತೆರಳುತ್ತಿದ್ದವರ ಮೇಲೆ ಬೊಲೆರೋ ವಾಹನ ಹರಿದು ಮೂವರು ಸಾವನ್ನಪ್ಪಿ, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಶಕ್ತಿನಗರ ಬಳಿ ನಡೆದಿದೆ.
ಹೆಗ್ಗಸನಹಳ್ಳಿ ಗ್ರಾಮದ ಅಯ್ಯನಗೌಡ (29), ಮಹೇಶ (24) ಮತ್ತು ಉದಯಕುಮಾರ (30) ಮೃತಪಟ್ಟವರು.
ದುರ್ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರಲ್ಲಿ ಓರ್ವನನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಿದರೆ, ಮತ್ತೋರ್ವನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಶಕ್ತಿನಗರ ಬಳಿ ಬರುವ ಹಳೆ ಮೈಸೂರು ಪೆಟ್ರೋ ಕೆಮಿಕಲ್ಸ್ ಫ್ಯಾಕ್ಟರಿ ಹತ್ತಿರ ಈ ದುರ್ಘಟನೆ ಸಂಭವಿಸಿದೆ.
ಹನುಮಾನ್ ಜಯಂತಿ ಪ್ರಯುಕ್ತ ಗ್ರಾಮದಲ್ಲಿ ಆಂಜನೇಯ ದೇವಾಲಯದ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ 10 ಜನ ಸೇರಿ ಶಕ್ತಿನಗರ ಹತ್ತಿರ ಕೃಷ್ಣಾ ನದಿಯಿಂದ ನೀರು ತಂದು ಪೂಜೆ ಮಾಡುವುದಕ್ಕೆ ಬೆಳಗಿನ ಜಾವ ಹೊರಟಿದ್ದರು. ಈ ಸಮಯದಲ್ಲಿ ಬೊಲೆರೋ ವಾಹನ ಇವರ ಮೇಲೆ ಹರಿದಿದೆ.
ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದು,ಅವರನ್ನು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗೆ ರಿಮ್ಸ್ಗೆ ರವಾನಿಸಲಾಯಿತಾದರೂ ಮಾರ್ಗ ಮಧ್ಯದಲ್ಲಿ ಮೂವರು ಮೃತಪಟ್ಟಿದ್ದಾರೆ.ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಬುಲೇರೋ ವಾಹನ ಚಾಲಕ ನಿರ್ಲಕ್ಷ್ಯದಿಂದ ಹಾಗೂ ವೇಗವಾಗಿ ಚಲಾಯಿಸಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಘಟನಾ ಸ್ಥಳಕ್ಕೆ ಶಕ್ತಿ ನಗರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.