ಬೆಂಗಳೂರು, ಅ.16- ತನ್ನ ಸ್ನೇಹಿತರ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಪತಿರಾಯನೊಬ್ಬ ಪತ್ನಿಗೆ ಒತ್ತಾಯಿಸಿದ್ದು ಇದರಿಂದ ಅಘಾತಕ್ಕೊಳಗಾದ ಪತ್ನಿ ಅಮೃತಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ತನ್ನ ಮೂರು ಜನ ಸ್ನೇಹಿತರ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಪತಿ ಒತ್ತಾಯಯಿಸಿದ್ದಾನೆ ಎಂದು ಪತ್ನಿ (ಮಂಗಳೂರು ಮೂಲದ ಮಹಿಳೆ) ಆರೋಪಿಸಿ ದೂರು ಸಲ್ಲಿಸಿದ್ದಾರೆ.
ಅಲ್ಲದೇ ಈ ಹಿಂದೆ ಪತಿಯ ವಾಟ್ಸಪ್ ಚೆಕ್ ಮಾಡಿದಾಗ ಅನೇಕ ಅಶ್ಲೀಲ ಮೆಸೇಜ್ ಹಾಗೂ ಲೈಂಗಿಕ ಕಾರ್ಯಕರ್ತೆಯರ ಬೆಲೆ ಬಗ್ಗೆ ಚಾಟ್ ಗಳಿದ್ದವು.
ಇದನ್ನು ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಸದ್ಯ ಈ ಬಗ್ಗೆ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲವು ವರ್ಷಗಳ ಹಿಂದೆಯೇ ವಿವಾಹವಾಗಿದ್ದ ಈ ದಂಪತಿಗೆ 11 ವರ್ಷದ ಪುತ್ರ ಸೇರಿ ಇಬ್ಬರು ಮಕ್ಕಳಿದ್ದಾರೆ. ಈ ನಡುವೆ ಪತಿರಾಯನ ಅಸಹಜ ನಡವಳಿಕೆ ಶುರುವಾಗಿದ್ದು ಈಗ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ನಿರಾಕರಿಸಿದ ಹಿನ್ನಲೆಯಲ್ಲಿ ತನಗೆ ಬೆದರಿಕೆ ಹಾಕಿದ್ದಾರೆ ಅಷ್ಟೇ ಅಲ್ಲ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮಹಿಳೆ ಕೊಟ್ಟ ದೂರು:
ದೂರುದಾರ ಮಹಿಳೆಗೆ ಕಳೆದ 2007 ರ ಮೇ.10 ರಂದು ಮಂಗಳೂರು ಮೂಲದ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ವಿಕ್ರಮ್ ಹಾಗೂ ತಾನ್ಯ ಎನ್ನುವ ಎರಡು ಮಕ್ಕಳಿವೆ. ಮಂಗಳೂರಿನಲ್ಲಿ ವಾಸವಿದ್ದು, ಗಂಡ ಮನೆಯಲ್ಲಿ ಚಿಕ್ಕಪುಟ್ಟ ವಿಚಾರಕ್ಕೆ ಗಲಾಟೆ ಮಾಡುತ್ತಿದ್ದರು. ನನಗೆ ಸರಿಯಾದ ಸಮಯ ಕೊಡದೇ ಕಿರಿಕಿರಿ ಮಾಡುತ್ತಿದ್ದರು.
ನಾನು ಕೆಲಸದ ಒತ್ತಡದಲ್ಲಿ ಇರುತ್ತಾರೆಂದು ಹೊಂದಿಕೊಂಡು ಹೋಗುತ್ತಿದ್ದೆ. ನಂತರ ನಾನು ನನ್ನ ಪತಿ ಹಾಗೂ ಮಕ್ಕಳು ಮಂಗಳೂರಿನ ಡಿಸಿ ಬಂಗಲೆ ಹತ್ತಿರದ ಮನೆಯೊಂದಕ್ಕೆ ಶಿಫ್ಟ್ ಆಗಿದ್ದೆವು.
ಆ ಸಂದರ್ಭದಲ್ಲಿ ನನ್ನ ಪತಿ ತನ್ನ ಐ ಫೋನ್ ಅನ್ನು ಮಕ್ಕಳಿಗೆ ಆಟವಾಡಲು ಕೊಟ್ಟಿದ್ದರು. ಇನ್ನು ನನ್ನ ಫೋನ್ ಹಾಳಾಗಿದ್ದರಿಂದ ಗಂಡನ ಇನ್ನೊಂದು ಫೋನ್ ಉಪಯೋಗಿಸುತ್ತಿದ್ದೆ. ಆ ವೇಳೆ ವಾಟ್ಸಪ್ ಚಾಟ್ ತೆಗೆದು ನೋಡಿದಾಗ ತನ್ನ ಸ್ನೇಹಿತರಾದ ಬಾಬು, ಅನಂತ ಕುಮಾರ್ ಹಾಗೂ ವಿರೇಂದ್ರ ಎಂಬುವರೊಂದಿಗೆ ನನ್ನ ಜೊತೆ ದೈಹಿಕ ಸಂಬಂಧ ಹೊಂದಿರುವ ಬಗ್ಗೆ ಹೇಳಿಕೊಂಡಿರುವುದು ಕಂಡುಬಂದಿದೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಅಲ್ಲದೇ ಬೇರೆ ಬೇರೆ ಸೆಕ್ಸ್ ವರ್ಕರ್ಗಳೊಂದಿಗೆ ಬೆಲೆ ಬಗ್ಗೆ ಮಾತನಾಡಿರುವ ಚಾಟಿಂಗ್ ಮಾಡಿರುವುದನ್ನು ಕಂಡು ನಾನು ಈ ಬಗ್ಗೆ ಪತಿಯನ್ನು ಕೇಳಿದ್ದೆ. ಆದರೆ, ನನ್ನ ಗಂಡ ಗಲಾಟೆ ಮಾಡಿ ಅದು ನನ್ನ ಇಷ್ಟ. ಏನಾದರೂ ಮಾಡಿಕೊಳ್ಳುತ್ತೇನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಸಾಯಿಸಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿ ಹೊಡೆದಿದ್ದಾರೆ. ಹಾಗೇ ಇದನ್ನು ಪಬ್ಲಿಕ್ ಮಾಡಿದರೆ ನಿನಗೆ ನಿನ್ನ ಮಕ್ಕಳಿಗೆ ಯಾವುದೇ ಜೀವನಾಂಶ ಕೊಡುವುದಿಲ್ಲ. ಆಗ ನೀನು ನಿನ್ನ ಮಕ್ಕಳು ಬೀದಿಗೆ ಬೀಳುತ್ತೀರಾ ಎಂದು ಹೆದರಿಸಿದ್ದಾರೆ.
ಆದರೂ ಸಹ ಈ ಬಗ್ಗೆ ನಮ್ಮ ತಂದೆ-ತಾಯಿ ಹೇಳಿದ್ದೆ. ಅವರು ಎಲ್ಲರನ್ನೂ ಸೇರಿಸಿ ಬುದ್ಧಿವಾದ ಹೇಳಿದ್ದರು. ಆದರೂ ಅವರು ಮೊದಲಿನಂತೆ ಮತ್ತೆ ಹಳೇ ಚಾಳಿ ಮುಂದುವರೆಸಿ ನನ್ನ ಸರಿಯಾಗಿ ನೋಡಿಕೊಳ್ಳದೇ ಕಡೆಗಣಿಸಿದ್ದು, ಆಗ ನಾನು ನನ್ನ ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದು ನಮ್ಮ ತಂದೆ-ತಾಯಿಯೊಂದಿಗೆ ವಾಸವಿದ್ದೆ. ಆ ಸಮಯದಲ್ಲಿ ಮತ್ತೆ ಹಿರಿಯರೆಲ್ಲ ಸೇರಿ ರಾಜಿ ಪಂಚಾಯಿತಿ ಮಾಡಿಸಿದ್ದರು. ಬಳಿಕ ಬೆಂಗಳೂರಿನ ಆರ್ಎಂ ಜೆಡ್ ಲ್ಯಾಟಿಟ್ಯೂಡ್ನಲ್ಲಿ ಪ್ಲ್ಯಾಟ್ ಖರಿದೀಸಿ ಅಲ್ಲಿಗೆ ಕರೆದುಕೊಂಡು ಹೋಗಿದ್ದ. ಆದರೂ ಸಹ ಗಂಡ ನನ್ನೊಂದಿಗೆ ಸರಿಯಾಗಿ ಸಂಸಾರ ಮಾಡದೇ ಆಗಾಗ ಮನೆಗೆ ಬಂದು ನೀನು ನನ್ನ ಇತರೆ ಸ್ನೇಹಿತರೊಂದಿಗೆ ಲೈಂಗಿಕ ಸಂಪರ್ಕ ಮಾಡುವಂತೆ ಹೇಳಿದ್ದ. ಇದಕ್ಕೆ ನಾನು ಒಪ್ಪದೇ ಇದ್ದಾಗ ನನ್ನೊಂದಿಗೆ ಗಲಾಟೆ ಮಾಡಿ ಮಾನಸಿಕ ದೈಹಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ನಿನ್ನ ಜೀವನಕ್ಕೆ ಯಾವುದೇ ಹಣಕಾಸಿನ ಸಹಾಯ ಮಾಡುವುದಿಲ್ಲ ಎಂದು ಹದರಿಸಿ ನನಗೆ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.