ರಾಜಕೀಯ ಅಧಿಕಾರ ಎನ್ನುವುದು ಅತ್ಯಂತ ಆಕರ್ಷಣೀಯ ಪದವಾಗಿದೆ ಇದಕ್ಕಾಗಿ ಹಾಲಿ ರಾಜಕಾರಣಿಗಳು ತಮ್ಮೆಲ್ಲಾ ಶಕ್ತಿ ವಿನಿಯೋಗಿಸುತ್ತಾರೆ.ಇದನ್ನು ಗಿಟ್ಟಿಸಿಕೊಂಡು ಅಧಿಕಾರ ಚಲಾಯಿಸುವ ರಾಜಕಾರಣಿಗಳನ್ನು ಹತ್ತಿರದಿಂದ ನೋಡುವ ಹಲವು ಅಧಿಕಾರಿಗಳು ತಾವೂ ಕೂಡಾ ರಾಜಕಾರಣಿಯಾಗಿ ಅಧಿಕಾರ ಹಿಡಿಯಬೇಕು ಎಂದು ಬಯಸುತ್ತಾರೆ. ಈ ರೀತಿ ಬಯಸಿ ಕೆಲವರು ಯಶಸ್ವಿಯಾದರೂ ಮತ್ತೆ ಕೆಲವರು ಯಶಸ್ಸಿಗಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಇದೀಗ ಇಂತಹವರ ಸಾಲಿಗೆ ಸೇರಲು ರಾಜ್ಯದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಇದು ಅಂತಹ ವಿಶೇಷವಿಲ್ಲ ಎನಿಸಬಹುದು ಆದರೆ ಗಮ್ಮತ್ತು ಎನೆಂದರೆ ಇಬ್ಬರೂ ದಲಿತ ಸಮುದಾಯಕ್ಕೆ ಸೇರಿದವರು ಇಬ್ಬರೂ ಕುಡಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಂತದ ಅಧಿಕಾರಿಗಳು,ಇಬ್ಬರೂ ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ದತೆ ನಡೆಸಿದ್ದಾರೆ. ಅಂದಹಾಗೆ ಇಬ್ಬರೂ ಒಂದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ಯಾರು ಆ ಇಬ್ಬರು ಅಧಿಕಾರಿಗಳು ಅಂತಿರಾ..? ಸಾರ್ವಜನಿಕ ಉದ್ದಿಮೆಗಳ ಇಲಾಖೆ ಮುಖ್ಯಸ್ಥ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಬಿ.ಎಚ್.ಅನಿಲ್ ಕುಮಾರ್ ಮತ್ತು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್..
ಈ ಇಬ್ಬರೂ ಅಧಿಕಾರಿಗಳು ತಮಗಿರುವ ಬಿಜೆಪಿ ಹಿರಿಯ ನಾಯಕರ ಒಡನಾಟವನ್ನು ಬಳಸಿಕೊಂಡು ಸಕ್ರಿಯ ರಾಜಕಾರಣಕ್ಕಿಳಿಯಲು ಸಜ್ಜುಗೊಂಡಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಹಿರಿಯ ನಾಯಕ ಆರ್.ಅಶೋಕ್ ಬೆಂಬಲದೊಂದಿಗೆ ಬಿಜೆಪಿಯಲ್ಲಿ ಅದೃಷ್ಟ ಪರೀಕ್ಷೆಗೆ ಮಂಜುನಾಥ್ ಪ್ರಸಾದ್ ಮುಂದಾದರೆ, ಗೋವಿಂದ ಕಾರಜೋಳ,ರಮೇಶ್ ಜಿಗಜಿಣಗಿ ಮತ್ತು ಎ.ನಾರಾಯಣಸ್ವಾಮಿ ಹಾಗು ಸಂಘ ಪರಿವಾರದ ಕೆಲ ನಾಯಕರ ಬೆಂಬಲದೊಂದಿಗೆ ಅನಿಲ್ ಕುಮಾರ್ ಬಿಜೆಪಿ ಮೂಲಕ ರಾಜಕಾರಣ ಪ್ರವೇಶಿಸಲಿದ್ದಾರೆ.
ಇನ್ನೊಂದು ಕುತೂಹಲಕರ ಸಂಗತಿಯೆಂದರೆ ಈ ಇಬ್ಬರೂ ಹಿರಿಯ ಅಧಿಕಾರಿಗಳು ತುಮಕೂರು ಜಿಲ್ಲೆಯ ಕೊರಟಗೆರೆ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯುವ ಪ್ರಯತ್ನ ನಡೆಸಿದ್ದಾರೆ.
ಈ ಇಬ್ಬರೂ ಕ್ಷೇತ್ರದಲ್ಲಿ ತಮ್ಮದೆ ಬೆಂಬಲಿಗರ ಪಡೆಯನ್ನು ಕಟ್ಟುತ್ತಿದ್ದು ತಮ್ಮ ಸಮುದಾಯಗಳಿಗೆ ಸೇರಿದ ಮುಖಂಡರ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಡಾ.ಪರಮೇಶ್ವರ್ ಪ್ರತಿನಿಧಿಸುತ್ತಿರುವ ಈ ಕ್ಷೇತ್ರ ಹಲವು ವೈಶಿಷ್ಟ್ಯಗಳಿಂದ ಕೂಡಿದೆ ದಲಿತ, ಹಿಂದುಳಿದ ಸಮುದಾಯದವರೆ ಹೆಚ್ಚಾಗಿರುವ ಕ್ಷೇತ್ರದಲ್ಲಿ ಲಿಂಗಾಯಿತ, ಒಕ್ಕಲಿಗ ಹಾಗು ಅಲ್ಪಸಂಖ್ಯಾತರ ಮತಗಳು ಸಮ ಪ್ರಮಾಣದಲ್ಲಿವೆ ಬಿಜೆಪಿಯಿಂದ ಕಣಕ್ಕಿಳಿದರೆ ತಮ್ಮ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯದ ಮತಗಳು ಕಟ್ಟಿಟ್ಟ ಬುತ್ತಿ ಎಂದು ಈ ಇಬ್ಬರೂ ನಾಯಕರು ಲೆಕ್ಕಾಚಾರ ಹಾಕಿದ್ದಾರೆ.ಅಲ್ಲದೆ ಡಾ.ಪರಮೇಶ್ವರ್ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಕುರಿತಂತೆ ಸ್ಪಷ್ಟತೆಯಿಲ್ಲ ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ.ಜೆಡಿಎಸ್ ಸಾಕಷ್ಟು ಪ್ರಬಲವಾಗಿದೆಯಾದರೂ, ಮಾಜಿ ಶಾಸಕ ಸುಧಾಕರ್ ಲಾಲ್ ಹಲವಾರು ಕಾರಣಗಳಿಂದ ಕ್ಷೇತ್ರದಲ್ಲಿ ಕಾರ್ಯಕರ್ತರ ವಿರೋಧ ಎದುರಿಸುತ್ತಿದ್ದಾರೆ.
ಇದರಿಂದ ತಮಗೆ ಲಾಭ ಎನ್ನುವುದು ಈ ಅಧಿಕಾರಿಗಳ ಲೆಕ್ಕಾಚಾರ.ಆದರೆ ಈ ಪೈಟ್ ನಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕುತೂಹಲಕರ ಸಂಗತಿಯಾಗಿದೆ.
Previous Articleಹಸೆಮಣೆಯಿಂದ ಸೀದಾ exam ಹಾಲ್ ಗೆ
Next Article ನೋಯ್ಡಾದಲ್ಲಿ ಅಪಘಾತ.. ಕರ್ನಾಟಕದ ವ್ಯಕ್ತಿ ದುರ್ಮರಣ