ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸಿರುವ ಡ್ರೋನ್ ದಾಳಿಯಲ್ಲಿ ಅಲ್-ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಕೊಲೆಯಾಗಿದ್ದಾರೆ ಎಂದು ಸೋಮವಾರ ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಟ್ವಿಟ್ಟರ್‌ನಲ್ಲಿ ದಾಳಿ ನಡೆದಿರುವುದನ್ನು ದೃಢಪಡಿಸಿದ್ದಾರೆ. ‘ಜುಲೈ 31ರಂದು ಕಾಬೂಲ್ ನಗರದ ಶೇರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವಾಯುದಾಳಿ ನಡೆಸಲಾಯಿತು,’ ಎಂದು ಹೇಳಿದ್ದಾರೆ. ಇತ್ತ ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ವಿರುದ್ಧದ ಯಶಸ್ವಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕುರಿತು ಅಧ್ಯಕ್ಷ ಜೋ ಬೈಡನ್ ಘೋಷಣೆ ಮಾಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನಡೆಸಿದ ವೈಮಾನಿಕ ದಾಳಿಯಲ್ಲಿ ಶನಿವಾರ ಅಲ್ ಖೈದಾ ಮುಖ್ಯಸ್ಥ ಅಯ್ಮಾನ್ ಅಲ್-ಜವಾಹಿರಿ ಸಾವನ್ನಪ್ಪಿದ್ದಾನೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ‘ಶನಿವಾರ, ನನ್ನ ನಿರ್ದೇಶನದ ಮೇರೆಗೆ, ಯುನೈಟೆಡ್ ಸ್ಟೇಟ್ಸ್ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ವೈಮಾನಿಕ ದಾಳಿಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿತು ಮತ್ತು ಅಲ್ ಖೈದಾದ ಅಮೀರ್ ಅಯ್ಮಾನ್ ಅಲ್-ಜವಾಹಿರಿಯನ್ನು ಕೊಂದಿತು’ ಎಂದು ಬೈಡನ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ಇನ್ನು ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕದಲ್ಲಿದ್ದಾಗ ಇದೇ ಅಲ್ ಖೈದಾದ ನಾಯಕ ಅಯ್ಮಾನ್ ಅಲ್ ಜವಾಹಿರಿ ಪ್ರತಿಕ್ರಿಯಿಸಿ ಭಾರತೀಯ ಮುಸ್ಲಿಂರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದ ಮಾತ್ರವಲ್ಲದೆ ಮಂಡ್ಯದಲ್ಲಿ ಅಲ್ಲಾ ಹು ಅಕ್ಬರ್ ಎಂದು ಕೂಗಿದ್ದ ಮುಸ್ಕಾನ್ ಖಾನ್‍ನ್ನು ಹೊಗಳಿದ್ದ.
9/11 ಎಂದೇ ಕರೆಯುವ ಸೆಪ್ಟೆಂಬರ್ 11, 2001ರಲ್ಲಿ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರ ಕಟ್ಟಡದ ಮೇಲೆ ನಡೆದಿದ್ದ ಉಗ್ರರ ದಾಳಿಯ ಮಾಸ್ಟರ್ ಮೈಂಡ್ ಈತನೇ ಎಂದು ಹೇಳಲಾಗಿತ್ತು. ಹತ್ತಾರು ವರ್ಷಗಳಿಂದ ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಜವಾಹಿರಿ, ಕೀನ್ಯಾ, ತಾಂಜೇನಿಯಾದ ಅಮೆರಿಕ ರಾಯಭಾರ ಕಚೇರಿಗಳ ಮೇಲೆಯೂ ದಾಳಿ ಸಂಘಟಿಸಿದ್ದ. ಜವಾಹಿರಿ ಹತ್ಯೆಗೆ ಕಳೆದ 6 ತಿಂಗಳುಗಳಿಂದ ಅಮೆರಿಕ ಗೌಪ್ಯವಾಗಿ ಯೋಜನೆ ರೂಪಿಸಿತ್ತು. ಜವಾಹಿರಿಗೆ ತಾಲಿಬಾನ್ ನಾಯಕ ಸಿರಾಜುದ್ದೀನ್ ಹಕ್ಕಾನಿ ಕಾಬೂಲ್‌ನಲ್ಲಿ ಆಶ್ರಯ ನೀಡಿದ್ದ. ಹಲವು ಮೂಲಗಳಿಂದ ಮಾಹಿತಿ ಕಲೆಹಾಕಿದ್ದ ಅಮೆರಿಕ ಡ್ರೋಣ್ ಮೂಲಕ ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿ, ಅಲ್ ಜವಾಹಿರಿಯನ್ನು ಹತ್ಯೆ ಮಾಡಿದೆ.