ಬೆಂಗಳೂರು, ಜ.26- ಲೋಕಸಭಾ ಚುನಾವಣೆ ಸನಿಹದಲ್ಲಿರುವಾಗ ಜಗದೀಶ್ ಶೆಟ್ಟರ್ (Jagadish Shettar) ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಅವರ ಪಕ್ಷಾಂತರದ ಅಸಲಿ ಕಾರಣ ಬೆಳಕಿಗೆ ಬಂದಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಲಿ ಸಂಸದರಾಗಿರುವ ಮಂಗಳಾ ಅಂಗಡಿ ಅವರ ಬದಲಾಗಿ ಟಿಕೆಟ್ ಯುವ ಮುಖಕ್ಕೆ ನೀಡಲು ತೀರ್ಮಾನ ಮಾಡಿದೆ.ಹೀಗಾಗಿ ಬಿಜೆಪಿ ಸೇರಿರುವ ಶೆಟ್ಟರ್,ಬೆಳಗಾವಿಯಲ್ಲಿ ಮಂಗಳಾ ಅಂಗಡಿ ಅವರ ಬದಲಾಗಿ ಅವರ ಪುತ್ರಿ ಶ್ರದ್ದಾ ಅವರಿಗೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಗೊತ್ತಾಗಿದೆ.
ಲಿಂಗಾಯತ ಸಮುದಾಯದ ಪ್ರಬಲ ನಾಯಕರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ಪುತ್ರಿ ಶ್ರದ್ಧಾ ಅವರು ಜಗದೀಶ ಶೆಟ್ಟರ್ ಅವರ ಸೊಸೆ ಹೀಗಾಗಿ ಶೆಟ್ಟರ್ ಅವರಿಗಾಗಿ ಪಕ್ಷಾಂತರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರದ್ದಾ ಅವರನ್ನು ಬಿಜೆಪಿ ಬೆಳಗಾವಿಯಲ್ಲಿ ಕಣಕ್ಕಿಳಿಸುವ ಎಲ್ಲಾ ಸಾಧ್ಯತೆಗಳಿವೆ.
ಸೊಸೆ ಬಿಜೆಪಿ ಅಭ್ಯರ್ಥಿಯಾಗಿ, ಮಾವ ಕಾಂಗ್ರೆಸ್ ಪಕ್ಷದಲ್ಲಿದ್ದರೆ ಪ್ರಚಾರದ ವೇಳೆ ಮುಜುಗರ ಅನುಭವಿಸಬೇಕಾಗಬಹುದು ಎಂದು ಚುನಾವಣೆ ಘೋಷಣೆಗೆ ಮೊದಲು ಶೆಟ್ಟರ್ ಅವರು ಕಮಲ ಪಾಳಯಕ್ಕೆ ಮರಳಿ ಪುನರ್ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಶೆಟ್ಟರ್ ಅವರು ಪಕ್ಷಕ್ಕೆ ಮರಳಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಶೆಟ್ಟರ್ ಪುತ್ರ,ಹಾಗೂ ಶ್ರದ್ಧಾ ಅವರ ಪತಿ ಸಂಕಲ್ಪ್ ಅವರು ನಮ್ಮ ತಂದೆ ಪಕ್ಷಕ್ಕೆ ಮರಳಿರುವುದು ಅತೀವ ಹರ್ಷ ತಂದಿದೆ ಎಂದಿದ್ದಾರೆ.
ನಮ್ಮ ಕುಟುಂಬ ಜನಸಂಘದ ಕಾಲದಿಂದ ಬಿಜೆಪಿ ಜೊತೆ ಗುರುತಿಸಿಕೊಂಡು ಪಕ್ಷ ಸಂಘಟನೆ ಮಾಡಿಕೊಂಡು ಬಂದಿದೆ. ನಮ್ಮ ತಂದೆ ಮೋದಿ ಅವರ ಪರವಾಗಿ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ. ಈ ವೇಳೆ ಸಂಸದೆ ಮಂಗಳಾ ಅಂಗಡಿ ಕೂಡ ಜತೆಯಲ್ಲಿದ್ದರು.