ಬೆಂಗಳೂರು, ಜ.26- ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇದೀಗ ತಮ್ಮ ಮಾತೃಪಕ್ಷಕ್ಕೆ ಮರಳಿದ್ದು, ಶೆಟ್ಟರ್ ನಡೆಯ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಅವರು ಕಾಂಗ್ರೆಸ್ ತೊರೆದಿದ್ದು ಒಳ್ಳೆಯದೇ ಆಯಿತು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯದಂತೆ ಶೆಟ್ಟರ್ ಕಾಂಗ್ರೆಸ್ ಬಿಟ್ಟು ಹೋಗಿದ್ದು ಒಳ್ಳೆಯದಾಯಿತು. ಅವರನ್ನು ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಒಪ್ಪಿಕೊಂಡಿರಲಿಲ್ಲ. ಪಕ್ಷ ಸಂಘಟನೆಯ ಸಂದರ್ಭದಲ್ಲಿ ಇದರಿಂದ ಮುಜುಗರವಾಗುತ್ತಿತ್ತು ಎಂದು ಹೇಳಿದರು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರಿಗೇ ಬಿಜೆಪಿಯಿಂದ ಅವಮಾನವಾಗಿದೆ ಎಂದು ದೊಡ್ಡ ದೊಡ್ಡ ಆರೋಪಗಳನ್ನು ಮಾಡಿ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಬೇಷರತ್ತಾಗಿ ಬಂದಿದ್ದರು. ಸ್ಥಳೀಯ ಕಾರ್ಯಕರ್ತರನ್ನು ತ್ಯಾಗ ಮಾಡಿ ಹುಬ್ಬಳ್ಳಿ–ಧಾರವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆಯಿದ್ದರೂ ಅವರ ಹಿರಿತನವನ್ನು ಗಮನಿಸಿ ಟಿಕೆಟ್ ನೀಡಿದ್ದೆವು. ಚುನಾವಣೆಯಲ್ಲಿ ಅವರು 35 ಸಾವಿರ ಅಂತರಗಳಿಂದ ಸೋಲು ಕಂಡರು. ಆದರೂ ತಕ್ಷಣವೇ ಅವರನ್ನು ವಿಧಾನಪರಿಷತ್‍ಗೆ 5 ವರ್ಷಗಳ ಅವಧಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದರು.
ಕಾಂಗ್ರೆಸ್ ನಲ್ಲಿ ಅವರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳಲಾಯಿತು.ಕಳೆದ 2-3 ತಿಂಗಳಿನಿಂದಲೂ ಬಿಜೆಪಿಯವರು ಶೆಟ್ಟರ್‍ರನ್ನು ಸಂಪರ್ಕಿಸುತ್ತಿದ್ದರು. ಬಿಜೆಪಿಯಿಂದ ಕಾಂಗ್ರೆಸ್‍ಗೆ ಹಲವು ನಾಯಕರನ್ನು ಶೆಟ್ಟರ್ ಕರೆತಂದಿದ್ದರು. ಮತ್ತಷ್ಟು ಜನರ ಪಟ್ಟಿ ಕೊಟ್ಟಿದ್ದರು. ಈಗ ಏಕಾಏಕಿ ಕಾಂಗ್ರೆಸ್ ತೊರೆದು ಹೋಗಿದ್ದಾರೆ.ಇದು ಒಂದು ದಿನಕ್ಕೆ ಮುಗಿದು ಹೋದ ವಿಷಯ. ಸೂರ್ಯ ಹುಟ್ಟಿ ಮುಳುಗಿದಂತೆ ಮರೆತುಬಿಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸಮುದ್ರವಿದ್ದಂತೆ ಯಾರೋ ಒಬ್ಬರು ಬಂದು ಹೋಗುವುದರಿಂದ ಏನೂ ನಷ್ಟವಾಗುವುದಿಲ್ಲ. ಪಕ್ಷ ತನ್ನ ಸಾಮರ್ಥ್ಯದಲ್ಲೇ ಮುಂದುವರೆಯಲಿದೆ.ಶೆಟ್ಟರ್ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್ ಸ್ಥಾನವನ್ನು ಪಕ್ಷದ ನಿಷ್ಠಾವಂತರಿಗೆ ನೀಡಿ ಸಂಘಟನೆಯನ್ನು ಮುಂದುವರೆಸುತ್ತೇವೆ. ಕಾಂಗ್ರೆಸ್ ಸೇರಿದ ಬಳಿಕ ಶೆಟ್ಟರ್ ಅವರು ಬಿಜೆಪಿ ವಿರುದ್ಧ ಮಾಡಿದ ಟೀಕೆಗಳಿಗೆ ಅವರಾಗಿಯೇ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
ಪಕ್ಷಕ್ಕೆ ಹೊಸಬರನ್ನು ಸೇರಿಸಿಕೊಳ್ಳುವಾಗ ತತ್ವ ಸಿದ್ಧಾಂತಗಳನ್ನು ಪರಿಶೀಲಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.