ಬೆಂಗಳೂರು – ಅಚ್ಚರಿಯ ಹಾಗೂ ಹಠಾತ್ ರಾಜಕೀಯ ವಿದ್ಯಮಾನವೊಂದದರಲ್ಲಿ ವಿಧಾನ ಪರಿಷತ್ ಸದಸ್ಯರು ಸದಸ್ಯತ್ವ ಹಾಗೂ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿರುವ ಹಿರಿಯ ನಾಯಕ ಜಗದೀಶ್ ಶೆಟ್ಟರ್ (Jagadish Shettar) ತಮ್ಮ ಮಾತೃ ಪಕ್ಷ ಬಿಜೆಪಿಗೆ ಮರಳಿ ಸೇರ್ಪಡೆಯಾಗಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿಯಲ್ಲಿ ತಮಗೆ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಪಕ್ಷದ ಸಂಘಟನೆಗೆ ಕೆಲಸ ಮಾಡಿದ ತಮ್ಮನ್ನು ಗೌರವಿಸುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
ಇದೀಗ ಶೆಟ್ಟರ್ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತ್ತೆ ಮಾತೃ ಪಕ್ಷಕ್ಕೆ ಹಿಂತಿರುಗಿದ್ದಾರೆ. ಈ ಪಕ್ಷಾಂತರ ಪರ್ವ ರಾಜ್ಯದ ಆಡಳಿತರೂಢ ಕಾಂಗ್ರೆಸ್ ಗೆ ದೊಡ್ಡ ಹಿನ್ನಡೆ ಎಂದು ಭಾವಿಸಲಾಗುತ್ತಿದೆ.
ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರಳಿರುವುದು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ತಂದು ಕೊಡಲಿದೆ ಎಂದು ವಿಶ್ಲೇಷಿಸಲಾಗಿದೆ.
ಕಿತ್ತೂರು ಕರ್ನಾಟಕ ಪ್ರಾಂತ್ಯದ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿರುವ ಶೆಟ್ಟರ್ ಅವರ ಸೇರ್ಪಡೆಯಿಂದ ಬಿಜೆಪಿಗೆ ಬೆಳಗಾವಿ ಚಿಕ್ಕೋಡಿ, ಧಾರವಾಡ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ ಪರಿಣಾಮ ಈ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಹಿನ್ನಡೆಯನ್ನು ಅನುಭವಿಸಿತು.ಅದೇ ರೀತಿಯಲ್ಲಿ ಲೋಕಸಭಾ ಚುನಾವಣೆ ಮೇಲೂ ಇದು ಪರಿಣಾಮ ಬೀರಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಪ್ರಯತ್ನ ನಡೆದಿತ್ತು.

ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರ ನಂತರ ಈ ಪ್ರಯತ್ನ ತೀವ್ರಗೊಂಡಿತ್ತು.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದರು.ಆದರೂ ಹೈಕಮಾಂಡ್ ಅಷ್ಟೊಂದು ಗಂಭೀರವಾಗಿ ಈ ವಿಷಯ ಪರಿಗಣಿಸಿರಲಿಲ್ಲ.
ಆದರೆ ಜೆಡಿಎಸ್ ಎನ್.ಡಿ.ಎ.ಮೈತ್ರಿಕೂಟ ಸೇರ್ಪಡೆಯಾದ ನಂತರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸಿದ ಪ್ರಯತ್ನ ಯಶಸ್ವಿಯಾಯಿತು.
ವಿಧಾನಸಭೆ ಚುನಾವಣೆ ಸಮಯದಲ್ಲಿ ಕೆಲವರ ಕಾರ್ಯವೈಖರಿಯಿಂದ ಬೇಸರಗೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದ ಬಿಜೆಪಿ ನಾಯಕರನ್ನು ಸಂಪರ್ಕಿಸಿ ಸಕ್ರಿಯವಾಗುವಂತೆ ಮಾಡಿದರು. ಅಷ್ಟೇ ಅಲ್ಲ, ಕೆಲವರ ಮುನಿಸನ್ನು ತಣಿಸುವಲ್ಲಿ ಯಶಸ್ವಿಯಾದರು.
ಅದೇ ರೀತಿ ಜಗದೀಶ್ ಶೆಟ್ಟರ್ ಅವರನ್ನು ಮರಳಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿಯ ರಾಷ್ಟ್ರೀಯ ನಾಯಕರ ಜೊತೆ ಸಮಾಲೋಚನೆ ನಡೆಸಿದರು.ಇತ್ತೀಚೆಗೆ ದೆಹಲಿಗೆ ತೆರಳಿದ್ದ ಅವರು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರೊಂದಿಗೆ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚಿಸಿ,ಶೆಟ್ಟರ್ ಅವರ ಅಗತ್ಯತೆಯನ್ನು ತಿಳಿಸಿದ್ದರು.ಆ ಬಳಿಕ ಈ ಇಬ್ಬರೂ ಗೃಹ ಸಚಿವ ಅಮಿತ್ ಶಾ ಜೊತೆಗೆ ಮಾತುಕತೆ ನಡೆಸಿ,ಶೆಟ್ಟರ್ ಸೇರ್ಪಡೆ ಇದ್ದ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು.
ಆನಂತರ ಬೆಂಗಳೂರಿಗೆ ಆಗಮಿಸಿದ ಅವರು ಹುಬ್ಬಳ್ಳಿಗೆ ತೆರಳಿ,ಜಗದೀಶ್ ಶೆಟ್ಟರ್ ಅವರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಶೆಟ್ಟರ್ ಅವರು ಬಿಜೆಪಿಯಲ್ಲಿ ತಮಗಾದ ಮುಜುಗರ ಹಾಗೂ ಅದಕ್ಕೆ ಕಾರಣರಾದ ಬಿ.ಎಲ್.ಸಂತೋಷ್ ಅವರ ವರ್ತನೆಯ ಬಗ್ಗೆ ಅಸಮಾಧಾನ ಹೊರ ಹಾಕಿದರು ಎನ್ನಲಾಗಿದೆ.
ಪಕ್ಷಕ್ಕೆ ತಾವು ಮರಳಿದ ನಂತರವೂ ಈ ಬಣ ತಮ್ಮ ವಿರುದ್ಧ ಕೆಲಸ ಮಾಡಲಿದೆ.ಚುನಾವಣೆ ಸಮಯ ಎಂದು ತಮ್ಮನ್ನು ಸ್ವಾಗತಿಸುತ್ತಾರೆ.ಆನಂತರ ಅಪಮಾನ ಮಾಡುತ್ತಾರೆ ಇವರ ಬಗ್ಗೆ ತಮಗೆ ಚೆನ್ನಾಗಿ ಗೊತ್ತಿದೆ. ಇವರನ್ನು ಹೊರತುಪಡಿಸಿ ಬಿಜೆಪಿಯಲ್ಲಿ ಯಾವ ನಾಯಕರ ಬಗ್ಗೆಯೂ ಬೇಸರವಿಲ್ಲ ಎಂದು ಹೇಳಿದರೆನ್ನಲಾಗಿದೆ.
ಸದ್ಯ ಕಾಂಗ್ರೆಸ್ ನಲ್ಲಿ ತಮಗೆ ಮಂತ್ರಿ ಸ್ಥಾನ ಸಿಕ್ಕಿಲ್ಲದಿರಬಹುದು.ಆದರೆ,ಗೌರವಕ್ಕೇನೂ ಕೊರತೆ ಉಂಟಾಗಿಲ್ಲ.ಹೀಗಿದ್ದರೂ ಮಾತೃಪಕ್ಷದ ಬಗ್ಗೆ ತಮಗೆ ಒಲವಿದೆ.ಪಕ್ಷಕ್ಕೆ ಮರಳಿದರೆ ತಮಗೆ ಸೂಕ್ತ ಸ್ಥಾನಮಾನ ಸಿಗುವ ಬಗ್ಗೆ ಪ್ರಧಾನಿ ಮೋದಿ,ಅಮಿತ್ ಶಾ ಅವರಿಂದ ಭರವಸೆ ಸಿಕ್ಕಲ್ಲಿ ತಾವು ಪಕ್ಷಕ್ಕೆ ಬರುತ್ತೇನೆ ಎಂದು ಹೇಳಿದರನ್ನಲಾಗಿದೆ.
ಶೆಟ್ಟರ್ ಅವರು ಇಷ್ಟು ಹೇಳಿದ್ದ ತಕ್ಷಣವೇ ಕುಮಾರಸ್ವಾಮಿ ಅಲ್ಲಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿ ಕರೆಮಾಡಿ ಮಾತನಾಡಿ,ಶೆಟ್ಟರ್ ಅವರ ಜೊತೆ ಮಾತನಾಡುವಂತೆ ಮಾಡಿದರ.ಆನಂತರ ಅಮಿತ್ ಶಾ ನೀಡಿದ ಭರವಸೆಯಿಂದ ಸಂತೃಪ್ತರಾದ ಶೆಟ್ಟರ್ ಪಕ್ಷಕ್ಕೆ ಮರಳುವುದಾಗಿ ತಿಳಿಸಿದರು ಎನ್ನಲಾಗಿದೆ. ಕುಮಾರಸ್ವಾಮಿ ಅಲ್ಲಿಂದಲೇ ಶೆಟ್ಟರ್ ಸೇರ್ಪಡೆಗೆ ದೆಹಲಿಯಲ್ಲಿ ಮುಹೂರ್ತ ನಿಗದಿಪಡಿಸಿ ಬೆಂಗಳೂರಿಗೆ ಆಗಮಿಸಿದರು.
ಬೆಂಗಳೂರಿಗೆ ಬಂದ ಅವರು ವಿಜಯೇಂದ್ರ ಮತ್ತು ಯಡಿಯೂರಪ್ಪ ಅವರ ಜೊತೆಗೆ ಮಾತನಾಡಿ,ದೆಹಲಿಗೆ ತೆರಳುವಂತೆ ಸೂಚಿಸಿದರು. ಅಂತೆಯೇ ನಿನ್ನೆ ಸಂಜೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಬೆಂಗಳೂರಿನಿಂದ ದೆಹಲಿಗೆ ತೆರಳಿದರೆ,ಹುಬ್ಬಳ್ಳಿಯಿಂದ ಜಗದೀಶ್ ಶೆಟ್ಟರ್ ತಮ್ಮ ಅಪ್ತ ಮಾಜಿ ಸಚಿವ ಶಂಕರ ಪಾಟೀಲ ಮುನ್ನೇನಕೊಪ್ಪ ಅವರೊಂದಿಗೆ ದೆಹಲಿಗೆ ತೆರಳಿದರು. ಅಲ್ಲಿ ಮೊದಲಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದರು ಆನಂತರ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮತ್ತು ರಾಜೀವ್ ಚಂದ್ರಶೇಕರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು
