ಬೆಂಗಳೂರು, ಸೆ.9 – ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸಿರುವ ಬಿಜೆಪಿ, ಸಂಘಟನೆಯಲ್ಲಿ ಕ್ಷೀಣಿಸಿರುವ ಹಳೆ ಮೈಸೂರು ಪ್ರದೇಶದಲ್ಲಿ ಪ್ರಾಬಲ್ಯಗಳಿಸುವ ದೃಷ್ಟಿಯಿಂದ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೈತ್ರಿ ಬಗ್ಗೆ ಉನ್ನತ ಮಟ್ಟದಲ್ಲಿ ಮಾತುಕತೆ ನಡೆದಿದೆ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆದರೆ, ಜೆಡಿಎಸ್ (JDS-BJP) ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಈ ಬಗ್ಗೆ ತಮಗೆ ಗೊತ್ತೇ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪ ಅವರು ಮೈತ್ರಿ ಕುರಿತು ಮಾತನಾಡಿರುವುದು ಅವರ ವೈಯಕ್ತಿಕ ಪ್ರತಿಕ್ರಿಯೆಯಾಗಿದೆ. ಆದರೆ, ಇದುವರೆಗೆ ಸೀಟು ಹಂಚಿಕೆ ಅಥವಾ ಯಾವುದರ ಬಗ್ಗೆಯೂ ಚರ್ಚೆ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಎರಡು ಪಕ್ಷದ ನಾಯಕರು ಸೌಹಾರ್ದಯುತವಾಗಿ ಹಲವು ಬಾರಿ ಭೇಟಿ ಮಾಡಿದ್ದೇವೆ. ಮೈತ್ರಿಗೆ ಸಂಬಂಧಿಸಿ ಚರ್ಚೆ ನಡೆಸುತ್ತಿದ್ದೇವೆ. ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿರುವುದರಿಂದ ಜನರಿಗೆ ಪರ್ಯಾಯ ಆಯ್ಕೆಗಳು ಬೇಕಿದೆ. 2006ರಲ್ಲಿ ನಾನು ಬಿಜೆಪಿಯೊಂದಿಗೆ ಕೈಜೋಡಿಸಿದ್ದೆ. 20 ತಿಂಗಳ ಉತ್ತಮ ಆಡಳಿತ ನಡೆಸಿದ್ದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿರುವ ಅವರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಯಾವ ನಿರ್ಧಾರ ಹೊರ ಬೀಳುವುದೋ ಗೊತ್ತಿಲ್ಲ ಆದರೆ ಸದ್ಯಕ್ಕೆ ಮೈತ್ರಿ ಕುರಿತಂತೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಮೂರೇ ತಿಂಗಳಿಗೆ ಜನರು ರೋಸಿ ಹೋಗಿದ್ದಾರೆ. ಯಾವುದೇ ಸರಕಾರಕ್ಕೆ ನಾಲ್ಕು ವರ್ಷ ಕಳೆದ ಮೇಲೆ ಆಡಳಿತ ವಿರೋಧಿ ಅಲೆ ಎದುರಾಗುತ್ತದೆ. ಆದರೆ, ಈ ಸರಕಾರ ಮೂರೇ ತಿಂಗಳಿಗೆ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇಂಥ ಸರಕಾರದ ವಿರುದ್ಧ ಸಂಘಟಿತವಾಗಿ ಹೋರಾಟ ನಡೆಸಬೇಕಿದೆ ಎಂದರು.
ಮೈತ್ರಿಯ ಮಾತುಕತೆ ಪ್ರಾಥಮಿಕ ಹಂತದಲ್ಲಿದೆ. ರಾಜ್ಯದ ಹಿತದೃಷ್ಟಿಯಿಂದ ಈ ರೀತಿಯ ಕೆಲವು ತೀರ್ಮಾನವಾಗುತ್ತದೆ. ಕೆಲದಿನ ಕಾದು ನೋಡಿ ಕೆಲವರು ಸಿದ್ದಾಂತಗಳ ಬಗ್ಗೆ ಮಾತನಾಡುತ್ತಾರೆ. ಅದರ ಬಗ್ಗೆ ಮುಂದೆ ಮಾತಾಡೋಣಾ ಎಂದು ಹೇಳಿದರು ಇನ್ನು ಮೈತ್ರಿ ವಿಷಯಕ್ಕೆ ಬಂದರೆ, ಅದಕ್ಕೆ ಇನ್ನೂ ಸಮಯ ಇದೆ. ಇನ್ನು ಹಲವಾರು ವಿಚಾರಗಳ ಬಗ್ಗೆ ಚರ್ಚೆ ಆಗಬೇಕಿದೆ. ಇಲ್ಲಿ ಪರಸ್ಪರ ಕೊಟ್ಟು ತೆಗೆದುಕೊಳ್ಳುವುದಲ್ಲ.. ವಿಶ್ವಾಸ, ಗೌರವ ಮುಖ್ಯ ಎಂದು ಅವರು ಹೇಳಿದರು.
ದಿನೇಶ್ ಗುಂಡೂರಾವ್ ವಿರುದ್ಧ ಕಿಡಿ:
ಕಾಂಗ್ರೆಸ್ ಪಕ್ಷದ ಯಾರೋ ಒಬ್ಬರು ನಾಯಕರು, ನಾಯಿ ಹಸಿದಿತ್ತು, ಅನ್ನ ಹಳಸಿತ್ತು ಅಂತ ಹೇಳಿದ್ದಾರೆ. 2018ರಲ್ಲಿ ಅವತ್ತು ಯಾವ ಅನ್ನ ಹಳಸಿತ್ತು? ಯಾವ ನಾಯಿ ಹಸಿದಿತ್ತು ಎನ್ನುವುದನ್ನು ನೆನಪು ಮಾಡಿಕೊಳ್ಳಬೇಕು. ಅವತ್ತು ನಮ್ಮ ಮನೆಗೆ ಬಂದಿದ್ದವರು ಯಾರು? ಎಂದು ತಿರುಗೇಟು ನೀಡಿದರು.
ರಾಜ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದೇನೆ. ಅಮಲಿನಲ್ಲಿ ನಾವು ಏನೋ ಮಾಡಿಬಿಟ್ಟಿದ್ದೇವೆ, ಜೆಡಿಎಸ್ ಪಕ್ಷವನ್ನು ಮುಗಿಸಿಬಿಟ್ಟಿದ್ದೇವೆ, ಅಲ್ಲಿಂದ ಇಲ್ಲಿಂದ ಕರೆದುಕೊಂಡು ಬರುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಅದಕ್ಕೆಲ್ಲಾ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ನವರು ಏನು ಬೇಕಾದರೂ ಹೇಳಬಹುದು. ಆದರೆ ಒಳಗಡೆ ಏನಿದೆ ಅನ್ನುವುದು ನನಗೂ ಗೊತ್ತಿದೆ. ಅವರ ಶಕ್ತಿ ಏನಿದೆ ಅನ್ನುವುದು ನನಗೂ ಗೊತ್ತಿದೆ. ರಾಜಕಾರಣದಲ್ಲಿ ಸದಾಕಾಲ ಒಂದೇ ರೀತಿ ಇರಲ್ಲ. ರಾಜಕಾರಣದ ಚಕ್ರ ಉರುಳುತ್ತಿರುತ್ತದೆ. ಅವರು ಏನು ಸಾಧನೆ ಮಾಡಿದ್ದಾರೆ ಅಂತ ಜನ ಸೀಟು ಕೊಡುತ್ತಾರೆ. ಲೂಟಿ ಮಾಡಿದ್ದಾರೆ, ಆ ಹಣದಲ್ಲಿ ಜನರನ್ನು ಕೊಂಡುಕೊಳ್ಳಬಹುದು ಅಂದುಕೊಂಡಿದ್ದಾರೆ, ಅದು ಸಾಧ್ಯ ಆಗಲ್ಲ ಎಂದರು.
ನಮಗೆ ಗೊತ್ತೇ ಇಲ್ಲ:
ಈ ವಿದ್ಯಮಾನಗಳ ಬಗ್ಗೆ ಹೊಸಪೇಟೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್,ಜೆಡಿಎಸ್ ಜತೆಗೆ ಬಿಜೆಪಿ ಸಖ್ಯ ಮಾಡಿಕೊಂಡಿರುವ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪಕ್ಷದ ವರಿಷ್ಠರು ಸಹ ಇದರ ಬಗ್ಗೆ ಏನೂ ಹೇಳಿಲ್ಲ. ಪಕ್ಷದ ನಾಯಕರಾದ ಯಡಿಯೂರಪ್ಪ ಅವರಿಗೆ ಅವರದೇ ಆದ ಮೂಲದಿಂದ ಮಾಹಿತಿ ಲಭ್ಯವಾಗಿರಬಹುದು ಎಂದು ಹೇಳಿದರು.
ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಪ್ರಲ್ಹಾದ ಜೋಷಿ ಅವರಿಗೂ ಗೊತ್ತಿಲ್ಲ. ಪಕ್ಷದ ವರಿಷ್ಠರು ಸಹ ಇದರ ಬಗ್ಗೆ ತಿಳಿಸಿಲ್ಲ. ಹಾಗಂತ ಯಡಿಯೂರಪ್ಪ ಅವರ ಮಾತನ್ನು ಅಲ್ಲಗಳೆಯಲೂ ಹೋಗುವುದಿಲ್ಲ. ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ಹೇಳುತ್ತೇನೆ ಎಂದರು.
ಅಧಿಕಾರಕ್ಕೆ ಮೈತ್ರಿ:
ಇದರ ನಡುವೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,ಜೆಡಿಎಸ್ ಪಕ್ಷ ಬಿಜೆಪಿಯ ‘ಬಿ' ಟೀಂ ಎಂದು ನಾನು ಕರೆಯುತ್ತಿದ್ದಾಗ ಅವರು ಕೋಪಿಸಿಕೊಳ್ಳುತ್ತಿದ್ದರು. ಆದರೆ, ಈಗ ಅದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಯಾವ ಸಿದ್ಧಾಂತವೂ ಇಲ್ಲ. ಅಧಿಕಾರಗೋಸ್ಕರ ಏನು ಬೇಕಾದರೂ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಜಾತ್ಯಾತೀತ ಎಂದು ಹೆಸರು ಇಟ್ಟುಕೊಂಡು, ಕೋಮುವಾದಿಗಳ ಜೊತೆ ಸೇರಿಕೊಂಡಿದ್ದಾರೆ. ಯಾವ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ದೇವೇಗೌಡರು ಹೇಳುತ್ತಿದ್ದರು. ಆದರೆ, ಈಗ ಪಕ್ಷದ ಉಳಿವಿಗೋಸ್ಕರ ಮಾಡಿಕೊಳ್ಳುತ್ತಿದ್ದೇವೆಂದು ಜಿ.ಟಿ. ದೇವೇಗೌಡರ ಕಡೆಯಿಂದ ಹೇಳಿಸಿದ್ದಾರೆ' ಎಂದು ಟೀಕಿಸಿದರು.