ಬೆಂಗಳೂರು, ಮಾ.14- ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಕರಡಿ ಸಂಗಣ್ಣ (Karadi Sanganna) ಅವರಿಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿರುವ ಹೈಕಮಾಂಡ್ ವಿರುದ್ಧ ಅವರ ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ.
ಕೊಪ್ಪಳ ಜಿಲ್ಲಾ ಬಿಜೆಪಿ ಕಚೇರಿಗೆ ಲಗ್ಗೆ ಹಾಕಿದ ಸಂಸದರ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಕಚೇರಿಯ ಕಿಟಕಿ ಬಾಗಿಲು ಧ್ವಂಸಗೊಳಿಸಿ ಪೀಠೋಪಕರಣಗಳನ್ನು ಪುಡಿಗಟ್ಟಿದರು.
ಕೊಪ್ಪಳ ಕ್ಷೇತ್ರದ ಘೋಷಿತ ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದರು ಈ ವೇಳೆ ಅಲ್ಲಿಗೆ ಧಾವಿಸಿದ ಕರಡಿ ಸಂಗಣ್ಣ ಬೆಂಬಲಿಗರು ದಿಡೀರ್ ಪ್ರತಿಭಟನೆ ನಡೆಸಿದರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಘೋಷಣೆ ಹಾಕಿದ ಕಾರ್ಯಕರ್ತರು ನಂತರ ಕಲ್ಲು ತೂರಾಟ ನಡೆಸಿದರು. ಇದರಿಂದ ಕಚೇರಿಯಾಗಿ ಕಿಟಕಿ ಬಾಗಿಲುಗಳ ಗಾಜು ಪುಡಿಪುಡಿಯಾದರೆ, ಕಚೇರಿ ಒಳಗೆ ನುಗ್ಗಿದ ಕುಪಿತ ಕಾರ್ಯಕರ್ತರ ಪಡೆ ಪೀಠೋಪಕರಣಗಳನ್ನು ತಂತ ಗೊಳಿಸಿತು.
ಇದರ ಬೆನ್ನಲ್ಲೇ ಘೋಷಿತ ಅಭ್ಯರ್ಥಿ ಬಸವರಾಜ ಅವರು ದೊಡ್ಡನಗೌಡ ಪಾಟೀಲ್ ಅವರೊಂದಿಗೆ ಕರಡಿ ಸಂಗಣ್ಣ ಅವರನ್ನು ಭೇಟಿ ಮಾಡಲು ತೆರಳಿದರು. ಅವರ ಭೇಟಿಗೆ ನಿರಾಕರಿಸಿದ ಕರಡಿ ಸಂಗಣ್ಣ ಕ್ಷೇತ್ರದಲ್ಲಿ ಹೇಗೆ ಪ್ರಚಾರ ಮಾಡುತ್ತಿರೋ ಗೆಲುವು ಸಾಧಿಸುತ್ತಿರೋ ನೋಡುತ್ತೀನಿ ಎಂದು ಹೇಳಿ ಕಳುಹಿಸಿದರು.
ಈ ಘಟನೆ ನಡೆದ ನಂತರ ಕರಡಿ ಸಂಗಣ್ಣ ಅವರ ಮನೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಲು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಕೂಡ ಆಗಮಿಸಿದ್ದಾರೆ. ಈ ವೇಳೆ ಸಂಸದ ಸಂಗಣ್ಣ ಬೆಂಬಲಿಗನೊಬ್ಬ ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಗರಂ ಆದ ಎಂಎಲ್‌ಸಿ ಹೇಮಲತಾ ನಾಯಕ್ ಅವರು, ನೀನ್ಯಾವನೋ ನನ್ನ ಕೇಳುವುದಕ್ಕೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಬಳಿಕ ಎದುರಿನ ವ್ಯಕ್ತಿ ನಾನು ಕಾರ್ಯಕರ್ತ ಹೀಗಾಗಿ ಕೇಳಿದ್ದೇನೆ ಎಂದಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಹೇಮಲತಾ ನಾಯಕ್ ನಾನು ಕೂಡ ಕಾರ್ಯಕರ್ತಳಾಗಿಯೇ ಕೆಲಸ ಮಾಡಿದವಳು. ನಾನು ಕೂಡ ಬಿಜೆಪಿ ಕಾರ್ಯಕರ್ತೆಯಾಗಿಯೇ ಇಲ್ಲಿಗೆ ಬಂದಿದ್ದೇನೆ. ಹೆಚ್ಚಿಗೆ ಮಾತನಾಡಿದರೆ ಬೂಟು ತಗೊಂಡು ಹೊಡೆಯುತ್ತೇನೆ.. ನನ್ನ ಮಗನೇ… ಎಂದು ಬೈದಿದ್ದಾರೆ. ಈ ವೇಳೆ ಪೊಲೀಸರು ಬಂದು ಕಾರ್ಯಕರ್ತನನ್ನು ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಮನೆಯಿಂದ ಹೊರಗೆ ಕಳುಹಿಸಿ ಪರಿಸ್ಥಿತಿಯನ್ನು ತಹಬಂದಿಗೆ ತಂದರು.