ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ವಿರುದ್ಧವೇ ಬಿಜೆಪಿ ತಿರುಗಿ ಬಿದ್ದಿದೆ. ಅದರಲ್ಲೂ ಸರ್ಕಾರದ ವಿರುದ್ಧ ಕಾರ್ಯಕರ್ತರ ಆಕ್ರೋಶ ಸ್ಪೋಟಿಸಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಹತ್ಯೆ ಪ್ರಕರಣಗಳ ವಿರುದ್ಧ ಸಿಡಿದೆದ್ದಿರುವ ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿಯ ಕಾರ್ಯಕರ್ತರು ಗೃಹ ಸಚಿವ ಅರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅವರ ನಿವಾಸಕ್ಕೆ ಲಗ್ಗೆ ಹಾಕಲೆತ್ನಿಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.
ಬೆಂಗಳೂರಿನ ಜಯಮಹಲ್ ಬಳಿ ಇರುವ ಗೃಹ ಸಚಿವ ಅರಗ ಜ್ಞಾನೇಂದ್ರ ನಿವಾಸದ ಮುಂದೆ ಇಂದು ಬೆಳಿಗ್ಗೆ ಧರಣಿ ನಡೆಸಿದ ಎಬಿವಿಪಿ ಕಾರ್ಯಕರ್ತರು, ಸರ್ಕಾರದ ಕಾರ್ಯ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಾಲು ಸಾಲು ಹತ್ಯೆ. ಪ್ರಕರಣಗಳು ನಡೆಯುತ್ತಿದ್ದು, ಯುವ ಜನತೆಗೆ, ಸಾರ್ವಜನಿಕರಿಗೆ ರಕ್ಷಣೆ ಇಲ್ಲದಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಲ್ಲಿ ಗೃಹ ಸಚಿವರು ವಿಫಲರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಪ್ರತಿಭಟನಾ ನಿರತರು ಆಪಾದಿಸಿದರು.
ಗೃಹ ಸಚಿವರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಗೃಹ ಸಚಿವರ ಮನೆಗೆ ನುಗ್ಗಿ ಬಾಗಿಲು ತೆರೆಯಲು ಯತ್ನಿಸಿದರು ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಕಾರ್ಯಕರ್ತರನ್ನು ತಡೆದಿದ್ದಾರೆ.ಆಗ ಪೊಲೀಸರು ಹಾಗೂ ವಿದ್ಯಾರ್ಥಿ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ, ವಾಗ್ವಾದ ನಡೆದಿದೆ. ಕುಪಿತ ಗುಂಪು ಗೃಹ ಸಚಿವ ನಿವಾಸದ ಬಳಿ ಇದ್ದ ಹೂ ಕುಂಡಗಳನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದೆ. ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು ನೂರಾರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
Previous Articleತುಂಡು ಭೂಮಿ ರಸ್ತೆ ಪಾಲು ನೇಣಿಗೆ ಕೊರೊಳ್ಳೊಡಿದ ರೈತ
Next Article ಸಿಇಟಿ ಫಲಿತಾಂಶ ಪ್ರಕಟ: ಬೆಂಗಳೂರಿನ ಅಪೂರ್ವ ಟಂಡನ್ ಫಸ್ಟ್