ಬೆಂಗಳೂರು,ಆ.16- ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಮಾದರಿಯಲ್ಲಿ ಸರ್ಕಾರಿ ಹುದ್ದೆಗಳ ಎಲ್ಲಾ ನೇಮಕಾತಿಗಳಲ್ಲೂ ಕ್ರೀಡಾಪಟುಗಳಿಗೆ ಶೇ.2ರಷ್ಟು ಮೀಸಲಾತಿ ನೀಡುವ ನಿರ್ಣಯ ಕೈಗೊಂಡಿದೆ.
ಇತ್ತೀಚೆಗೆ ನಡೆದ ಕಾಮನವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮತ್ತು ಪದಕ ವಿಜೇತ ಕರ್ನಾಟಕದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ ಹಾಗು ಅಮೃತ ಕ್ರೀಡಾ ದತ್ತು ಯೋಜನೆಯ ಕ್ರೀಡಾಪಟುಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ಪ್ರಕಟಿಸಿದರು.
ಸರ್ಕಾರ ಕೈಗೊಂಡಿರುವ ನಿರ್ಣಯವನ್ನು ಶೀಘ್ರವೇ ಆದೇಶದ ಮೂಲಕ ಜಾರಿಗೆ ತರುವುದಾಗಿ ಮ ಘೋಷಿಸಿದರು.
ಸದ್ಯ ಅರಣ್ಯ ಮತ್ತು ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳಿಗೆ ಶೇ.2ರಷ್ಟು ಉದ್ಯೋಗ ಮೀಸಲಾತಿ ನೀಡಲಾಗುತ್ತಿದೆ ಇದನ್ನು ಇತರೆ ಸರ್ಕಾರಿ ಉದ್ಯೋಗಗಳಿಗೂ ವಿಸ್ತರಿಸುತ್ತೇವೆ ಇದಕ್ಕೆ ಸಂಬಂಧಿಸಿದ ಕಡತ ನನ್ನ ಬಳಿ ಇದೆ. ಆದಷ್ಟು ಬೇಗ ಇದನ್ನು ವಿಲೇವಾರಿ ಮಾಡುತ್ತೇನೆ ಎಂದು ಹೇಳಿದರು.
ದೇಶದ ಯಾವುದೇ ರಾಜ್ಯಗಳಲ್ಲೂ ಕ್ರೀಡೆಗಳಿಗೆ ನಮ್ಮ ಸರ್ಕಾರದಷ್ಟು ಪ್ರೋತ್ಸಾಹ ನೀಡಿರುವ ನಿದರ್ಶನಗಳಿಲ್ಲ. ಅಮೃತ ಯೋಜನೆಯಡಿ ಕ್ರೀಡಾಂಗಣ ಮತ್ತು ಕ್ರೀಡಾಪಟುಗಳ ದತ್ತು ಪಡೆಯಲಾಗುತ್ತದೆ ಎಂದು ಹೇಳಿದರು.
ಯಾರಿಗೆ ಭೌತಿಕ ಸಾಮಥ್ರ್ಯ ಹಾಗೂ ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಗುರಿ ಇರುತ್ತದೆಯೋ ಅಂಥವರು ಏನುಬೇಕಾದರೂ ಸಾಧಿಸಿ ತೋರುತ್ತಾರೆ. ನಿಮಗೆ ಮೊದಲು ಶಿಸ್ತನ್ನು ಮೂಡಿಸಿಕೊಳ್ಳಿ. ಅಂತಹ ಗುಣ ಇದ್ದರೆ ಮಾತ್ರ ಯಶಸ್ಸು ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ಕೇವಲ ಸರ್ಕಾರಿ ಹುದ್ದೆ ಪಡೆಯಲು ಕ್ರೀಡಾಪಟುಗಳಾಗಬೇಡಿ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಖೇಲೋ ಇಂಡಿಯ ಜೊತೆಗೆ ಜೀತ್ ಇಂಡಿಯ ಆಗಬೇಕು. ನಿಮ್ಮ ನೆರವಿಗೆ ಸರ್ಕಾರ ಸದಾ ಸಿದ್ದವಿದೆ. ದೇಶದ ಮತ್ತು ರಾಜ್ಯ ಹೆಮ್ಮೆಪಡುವ ಕೆಲಸವಾಗಬೇಕೆಂದು ಸಿಎಂ ಆಶಿಸಿದರು.
ಪ್ರಶಸ್ತಿ ಮೊತ್ತವನ್ನು ಹೆಚ್ಚಳ ಮಾಡಬೇಕೆಂಬ ಬೇಡಿಕೆ ಕೇಳಿಬಂದಿದೆ. 5ರಿಂದ 10 ಲಕ್ಷ, 10ರಿಂದ 25 ಲಕ್ಷ, 25ರಿಂದ 50 ಲಕ್ಷ, 50 ಲಕ್ಷದಿಂದ 50 ಕೋಟಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೀರಿ. ಇದರ ಚಿಂತ ಬೇಡ. ನಿಮ್ಮ ನೆರವಿಗೆ ನಾವು ಸದಾ ಸಿದ್ದ ಎಂದು ಹೇಳಿದರು.