ಚಾಮರಾಜನಗರ: ಸಾಲದ ಬಾಕಿ ಕಟ್ಟಲು ಕಾಲವಕಾಶ ಕೊಡಬೇಕು ಇಲ್ಲವೇ ತಮಗೆ ದಯಾಮರಣ ಕೊಡಬೇಕೆಂದು ರೈತರೊಬ್ಬರು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಸಾಲ ಮರು ಪಾವತಿ ಮಾಡದಿರುವ ಹಿನ್ನೆಲೆಯಲ್ಲಿ ಜಮೀನು ಹರಾಜು ಹಾಕಲಾಗುವುದು ಎಂದು ಕಂದೇಗಾಲ ಗ್ರಾಮದ ರೈತರ ಮನೆ ಮುಂದೆ ಗುಂಡ್ಲುಪೇಟೆ ಕಾವೇರಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ನೊಟೀಸ್ ಅಂಟಿಸಿದ್ದು ರೈತರು ಕಂಗಲಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಗ್ರಾಮದ ರೈತ ಗಿರೀಶ್ ಹಾಗು ಗುಂಡಪ್ಪ ಎಂಬುವರು 2012ರಲ್ಲಿ ಪಟ್ಟಣದ ಕಾವೇರಿ ಗ್ರಾಮೀಣ ಬ್ಯಾಂಕ್ ನಲ್ಲಿ 7 ಲಕ್ಷ ರೂ. ಬೆಳೆಸಾಲ ಪಡೆದಿದ್ದರು. ನಂತರ ರೈತರ ಎರಡು ವರ್ಷಗಳ ಕಾಲ ಕಂತಿನ ರೂಪದಲ್ಲಿ ಬೆಳೆ ಸಾಲದ ಹಣವನ್ನು ಬ್ಯಾಂಕ್‍ಗೆ 1.50 ಲಕ್ಷ ರೂ. ನಗದು ಪಾವತಿಸಿದ್ದಾರೆ. ಇದಲ್ಲದೇ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಸಾಲಮನ್ನಾ ಯೋಜನೆಯಡಿಯಲ್ಲಿ 1.75 ಲಕ್ಷ ರೂ. ಸಾಲಮನ್ನಾ ಆಗಿದೆಯಂತೆ.
ಓನ್ ಟೈಂ ಸೆಟಲ್‍ಮೆಂಟ್(ಒಟಿಎಸ್)ನಡಿ 5 ಲಕ್ಷ ರು.ಕಟ್ಟಿ ಎಂದು ಬ್ಯಾಂಕ್ ನೌಕರರು ಈ ಹಿಂದೆ ಹೇಳಿದ್ದರು. ಆಗ 5 ಲಕ್ಷ ರೂ. ಕಟ್ಟಲು ಬ್ಯಾಂಕ್ ಗೆ ಹೋದರೆ ಕೋರ್ಟ್‍ನಲ್ಲಿ ಕೇಸಿದೆ ಎಂದು ಸಾಗ ಹಾಕಿದ್ದರು. ಈಗ ಬಡ್ಡಿ, ಚಕ್ರ ಬಡ್ಡಿ ಎಲ್ಲಾ ಸೇರಿ 29 ಲಕ್ಷ ರೂ. ಕಟ್ಟಬೇಕಾಗುತ್ತದೆ ಎನ್ನುತ್ತಿದ್ದು ಇದಕ್ಕೆ ಒಪ್ಪದ ಕಾರಣ ಮನೆ ಮುಂದೆ ಜಮೀನು ಹರಾಜು ಮಾಡುವುದಾಗಿ ನೋಟೀಸ್ ಅಂಟಿಸಿದ್ದಾರೆ ಎಂದು ರೈತ ಗುಂಡಪ್ಪ ಅಳಲು ತೋಡಿಕೊಂಡಿದ್ದಾರೆ.
ನಮ್ಮ ಜಮೀನು ಹರಾಜು ಹಾಕಿದರೇ ನಮ್ಮ ಇಡೀ ಕುಟುಂಬ ಬೀದಿ ಪಾಲಾಗಲಿದ್ದು ದಯಾಮರಣಕ್ಕೆ ಅವಕಾಶ ಕೊಡಬೇಕೆಂದು ರಾಷ್ಟ್ರಪತಿಗೆ ಡಿಸಿ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ದಯಾಮರಣ ಅವಕಾಶ ಸಿಗದಿದ್ದರೇ ಈ ಹರಾಜು ನಿಲ್ಲಿಸಿ ಸಾಲ ಪಾವತಿಗೆ ಕಾಲವಕಾಶ ಕೊಡಬೇಕೆಂದು ಕೋರಿದ್ದಾರೆ.