ದಕ್ಷಿಣ ಕನ್ನಡ : ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಸೋಮವಾರ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜೊತೆಗೆ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನೂ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರವೀಣ್ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ. ಅವರ ಸಂಸಾರದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ಆಗಬೇಕು. ಕಾಟಾಚಾರಕ್ಕೆ ಸರ್ಕಾರ ತನಿಖೆ ಮಾಡಬಾರದು, ಸರ್ಕಾರ ಪ್ರಕರಣದ ಹಿಂದೆ ಇರುವವರ ಪತ್ತೆ ಮಾಡಲಿ. ಮೃತರ ಕುಟುಂಬಸ್ಥರಿಗೆ ನ್ಯಾಯ ಸಿಗಲಿ. ನಿಮ್ಮ ಸಂಸಾರದಲ್ಲಿ ಏನೇ ಸಮಸ್ಯೆ ಬಂದರೂ ನನಗೆ ಕರೆ ಮಾಡಿ ಅಂತ ನಂಬರ್ ಕೊಟ್ಟಿದ್ದೇನೆ. ಸರ್ಕಾರ ಕಾಟಾಚಾರಕ್ಕೆ ಪ್ರಕರಣವನ್ನು ಎನ್ ಐಎಗೆ ಕೊಟ್ಟಿದ್ದಾರೆ. ಅವರ ಜವಾಬ್ದಾರಿಯನ್ನ ಅವರಿಗೆ ಎತ್ತಿ ಹಾಕಿದ್ದಾರೆ. ನಮ್ಮ ಪೊಲೀಸರು ಸರಿ ಇದ್ದಾರೆ, ಎನ್ ಐಎಗೆ ಕೊಟ್ಟಿದ್ದು ಎಷ್ಟು ಕೇಸ್ ಬಗೆಹರಿದಿದೆ. ಈಗ ಎನ್ ಐಎಗೆ ಕೊಟ್ಟು ಅವರೂ ತನಿಖೆ ಮಾಡ್ತಿಲ್ಲ, ಈ ಪೊಲೀಸರೂ ಮಾಡ್ತಿಲ್ಲ. ನಮ್ಮ ಪೊಲೀಸರು ಸಮರ್ಥರಿರುವಾಗ ಅವರಿಗೆ ಕೊಟ್ಟು ಕೈತೊಳೆದುಕೊಂಡಿದ್ದಾರೆ, ಇದು ಸರಿಯಲ್ಲ’ ಎಂದಿದ್ದಾರೆ.